ADVERTISEMENT

₹100 ಕೋಟಿ ವಂಚನೆ ಆರೋಪ: ಕುರುಹಿನಶೆಟ್ಟಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಬಂಧನ

ಕೆಂಪೇಗೌಡನಗರ ಠಾಣೆಯಲ್ಲಿ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 19:31 IST
Last Updated 8 ನವೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಠೇವಣಿದಾರರಿಂದ ಸುಮಾರು ₹ 100 ಕೋಟಿ ಸಂಗ್ರಹಿಸಿ ವಂಚಿಸಿರುವ ಆರೋಪದಡಿ ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಧ್ಯಕ್ಷ ಬಿ.ಎಲ್. ಶ್ರೀನಿವಾಸ್ (64), ಉಪಾಧ್ಯಕ್ಷ ಬಿ. ಈಶ್ವರ್ (71), ಸಾಲಗಾರರಾದ ದಯಾನಂದ ಹೆಗ್ಡೆ (50), ವಿ. ನಾಗೇನಹಳ್ಳಿಯ ಪಿ. ಚಂದ್ರಶೇಖರ್ (55) ಹಾಗೂ ಸುರಭಿ ಚಿಟ್ಸ್ ಸಂಸ್ಥೆಯ ಬಿ.ಟಿ. ಮೋಹನ್ (75) ಬಂಧಿತರು.

‘2011ರಲ್ಲಿ ಸ್ಥಾಪನೆಯಾದ ಬ್ಯಾಂಕ್‌, ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಹಲವೆಡೆ ಶಾಖೆಗಳೂ ಇವೆ. 2011ರಿಂದ 2022ರವರೆಗೆ ನಡೆದಿದೆ ಎನ್ನಲಾದ ಸುಮಾರು ₹100 ಕೋಟಿ ಅಕ್ರಮದ ಬಗ್ಗೆ ಕೆಲ ಠೇವಣಿದಾರರು ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದ್ದು, ಸದ್ಯ ಐವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

2011ರಿಂದ ಅಧಿಕಾರ ಚಲಾವಣೆ: ‘ಮಲ್ಲೇಶ್ವರದ ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ಬಿ.ಎಲ್. ಶ್ರೀನಿವಾಸ್, ಬ್ಯಾಂಕ್ ಸ್ಥಾಪನೆಯಾದ 2011ರಿಂದಲೇ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸುತ್ತಿದ್ದರು. ಇದೇ ಅವಧಿಯಲ್ಲಿ ಠೇವಣಿದಾರರಿಂದ ಹಣ ಸಂಗ್ರಹಿಸಿ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಶಾಂತಿನಗರ ಬಸಪ್ಪ ರಸ್ತೆಯ ನಿವಾಸಿ ಬಿ. ಈಶ್ವರ್, 10 ವರ್ಷಗಳಿಂದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಅವರು ಸಹ ಅಕ್ರಮಕ್ಕೆ ಸಹಕರಿಸಿದ್ದರು. ಉಳಿದಂತೆ ಮರಿಯಣ್ಣನಪಾಳ್ಯ ಕಾವೇರಿ ಲೇಔಟ್‌ನ ದಯಾನಂದ ಹೆಗ್ಡೆ, ಆರ್‌.ಟಿ. ನಗರ ವಿ. ನಾಗೇನಹಳ್ಳಿಯ ಪಿ. ಚಂದ್ರಶೇಖರ್ ಹಾಗೂ ಮೈಕೊ ಲೇಔಟ್‌ನ ಬಿ.ಟಿ. ಮೋಹನ್‌, ಠೇವಣಿದಾರರ ಹಣವನ್ನೇ ಸಾಲ ಪಡೆದು ವಾಪಸು ಪಾವತಿಸದೇ ವಂಚಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ನಿಯಮಬಾಹಿರವಾಗಿ ಸಾಲ ಮಂಜೂರು: ‘2011ರಿಂದ 2022ರವರೆಗಿನ ಅವಧಿಯಲ್ಲಿ ಅಕ್ರಮ ನಡೆದಿರುವುದಾಗಿ ದೂರುದಾರರು ಆರೋಪಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದ್ದು, ಲೆಕ್ಕ ಪರಿಶೋಧಕರ ಸಹಾಯದಿಂದ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಸಾಲ ಕೋರಿ ಅರ್ಜಿ ಸಲ್ಲಿಸುವವರ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿರಲಿಲ್ಲ. ನಿಯಮಬಾಹಿರವಾಗಿ ಸುಸ್ತಿದಾರರಿಗೂ ನೂರಾರು ಕೋಟಿ ರೂಪಾಯಿ ಮಿತಿಮೀರಿದ ಸಾಲ ಮಂಜೂರು ಮಾಡಲಾಗಿತ್ತು. ಸುರಭಿ ಚಿಟ್ಸ್ ಸಂಸ್ಥೆ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದ ಅಧ್ಯಕ್ಷ–ಉಪಾಧ್ಯಕ್ಷ, ಠೇವಣಿದಾರರ ಹಣವನ್ನು ತಮಗೆ ಬೇಕಾದವರಿಗೆ ಸಾಲ ಕೊಡಿಸಿದ್ದರು. ಇದಕ್ಕಾಗಿ ಕಮಿಷನ್ ಸಹ ಪಡೆದಿದ್ದರೆಂಬುದು ಗೊತ್ತಾಗಿದೆ.’

‘ಸಾಲ ಪಡೆದ ವ್ಯಕ್ತಿಗಳು ವಾಪಸು ಪಾವತಿ ಮಾಡಿರಲಿಲ್ಲ. ಇದರಿಂದಾಗಿ ಬ್ಯಾಂಕ್ ಆರ್ಥಿಕವಾಗಿ ನಷ್ಟಕ್ಕೆ ಸಿಲುಕಿತ್ತು. ಠೇವಣಿದಾರರು ತಮ್ಮ ಹಣ ವಾಪಸು ನೀಡುವಂತೆ ಒತ್ತಾಯಿಸಲಾರಂಭಿಸಿದ್ದರು. ಆಡಳಿತ ಮಂಡಳಿಯವರು ನಿಗದಿತ ವೇಳೆಗೆ ಹಣ ನೀಡದಿದ್ದರಿಂದ ಠಾಣೆಗೆ ಠೇವಣಿದಾರರು ದೂರು ನೀಡಿದ್ದಾರೆ’ ಎಂದರು.

‘ಹಲವೆಡೆ ಆಸ್ತಿ ಸಂಪಾದನೆ’
‘ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರರು ಅಕ್ರಮ ಹಣ ಗಳಿಕೆ ಮೂಲಕ ಹಲವೆಡೆ ಆಸ್ತಿ ಸಂಪಾದಿಸಿರುವ ಮಾಹಿತಿ ಇದೆ. ಸದ್ಯ ಆಸ್ತಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಪಟ್ಟಿ ಅಂತಿಮವಾದ ನಂತರ, ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.