ಬೆಂಗಳೂರು: ಬಾರ್ ಅಂಡ್ ರೆಸ್ಟೊರೆಂಟ್‌ಗೆ ಹೋಗಿದ್ದ ಬ್ಯಾಂಕ್ ವ್ಯವಸ್ಥಾಪಕರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ಮೂಲದ ಉಲ್ಲಾಳದ ನಿವಾಸಿ ಮೇಘರಾಜ್ (31) ಮೃತಪಟ್ಟವರು. ಅವರು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಮೇಘರಾಜ್, ಉಲ್ಲಾಳದಲ್ಲಿ ಪತ್ನಿ ಹಾಗೂ ಆರು ತಿಂಗಳ ಮಗು ಜತೆಗೆ ವಾಸಿಸುತ್ತಿದ್ದರು. ಆರ್‌ಆರ್ ನಗರ ಮುಖ್ಯ ರಸ್ತೆಯಲ್ಲಿರುವ 1522 ಬಾರ್ ಅಂಡ್ ರೆಸ್ಟೊರೆಂಟ್‌ಗೆ ಗುರುವಾರ ರಾತ್ರಿ ಮೂವರು ಸ್ನೇಹಿತರೊಂದಿಗೆ ಹೋಗಿ ಮದ್ಯ ಸೇವಿಸಿ ಊಟ ಮಾಡಿದ್ದರು. ನಂತರ, ಬಿಲ್ ಪಾವತಿಸಿ ಸ್ನೇಹಿತರೊಂದಿಗೆ ರಸ್ಟೊರೆಂಟ್‌ನಿಂದ ರಾತ್ರಿ 11.30ರ ಸುಮಾರಿಗೆ ಹೊರಗೆ ಬಂದಿದ್ದರು. ಮತ್ತೆ ಒಳಗೆ ಹೋಗಿದ್ದರು. ತುಂಬ ಸಮಯ ಕಳೆದರೂ ಅವರು ಹೊರಗೆ ಬಂದಿರಲಿಲ್ಲ. ಸ್ನೇಹಿತರು ಒಳಗೆ ಹೋಗಿ ನೋಡಿದರೂ ಕಾಣಿಸಿಲ್ಲ.
ಬಳಿಕ ಬಾರ್‌ನ ವ್ಯವಸ್ಥಾಪಕರಿಗೆ ಮಾಹಿತಿ ನೀಡಿ, ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮೇಘರಾಜ್ ಅವರು ವಾಶ್‌ರೂಂಗೆ ಹೋಗಿರುವುದು ಕಂಡು ಬಂದಿತ್ತು. ಸ್ನೇಹಿತರು ವಾಶ್ ರೂಂ ಬಳಿ ಹೋಗಿ ಬಾಗಿಲು ತಟ್ಟಿ ಕೂಗಿದ್ದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆತಂಕಗೊಂಡು ಬಾಗಿಲು ಒಡೆದು ನೋಡಿದ್ದರು. ಆ ವೇಳೆ ಮೇಘರಾಜ್ ಮೃತಪಟ್ಟಿರುವುದು ಕಂಡು ಬಂದಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.