ADVERTISEMENT

ಕಂಪ್ಯೂಟರ್‌ ಭಾಷಾ ವಿಜ್ಞಾನಿ ಕೆ.ಪಿ. ರಾವ್‌ಗೆ ‘ಬನ್ನಂಜೆ ಪುರಸ್ಕಾರ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 16:24 IST
Last Updated 13 ಡಿಸೆಂಬರ್ 2025, 16:24 IST
ಕೆ.ಪಿ. ರಾವ್ ಅವರಿಗೆ ‘ಬನ್ನಂಜೆ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಮಲ್ಲೇಪುರಂ ಜಿ. ವೆಂಕಟೇಶ್, ಬನ್ನಂಜೆ ರಾಘವೇಂದ್ರ ಸ್ವಾಮೀಜಿ, ವಿನಯ್ ವಾರಣಾಸಿ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ 
ಕೆ.ಪಿ. ರಾವ್ ಅವರಿಗೆ ‘ಬನ್ನಂಜೆ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಮಲ್ಲೇಪುರಂ ಜಿ. ವೆಂಕಟೇಶ್, ಬನ್ನಂಜೆ ರಾಘವೇಂದ್ರ ಸ್ವಾಮೀಜಿ, ವಿನಯ್ ವಾರಣಾಸಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಗ್ಗೆ ಅನಗತ್ಯ ಆತಂಕ ಪಡುವ ಬದಲು, ಅದು ನಮ್ಮ ಜತೆಗಿನ ಸಹಯೋಗಿಯೆಂದು ಅರಿತು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಕಂಪ್ಯೂಟರ್‌ ಭಾಷಾ ವಿಜ್ಞಾನಿ ಕೆ.ಪಿ. ರಾವ್ ಹೇಳಿದರು. 

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಚಾರ್ಯರ ಐದನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ‘ಬನ್ನಂಜೆ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದರು. 

‘ಕಾಲ ಕಳೆದಂತೆ ಸೌಕರ್ಯದಲ್ಲಿ ಕೂಡ ಸಾಕಷ್ಟು ಬದಲಾವಣೆಯಾಗಿದೆ. ಅದೇ ರೀತಿ, ತಂತ್ರಜ್ಞಾನ ಕ್ಷೇತ್ರವೂ ಹೊಸ ಆಯಾಮಕ್ಕೆ ಹೊರಳಿದೆ. ತಂತ್ರಜ್ಞಾದ ಬಗ್ಗೆ ನಾವು ಅರಿತು ಸಾಗಬೇಕು. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳು ನಮ್ಮನ್ನು ಹೊಸ ರೀತಿಯ ಯೋಚನೆಗಳಿಗೆ ಹಚ್ಚಿ, ಹೊಸ ಅವಕಾಶಗಳನ್ನು ದರ್ಶನ ಮಾಡಿಸುತ್ತಿವೆ. ಇಂತಹ ತಂತ್ರಜ್ಞಾನಗಳನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. 

ADVERTISEMENT

‘ಬನ್ನಂಜೆ ಗೋವಿಂದಾಚಾರ್ಯರ ಜತೆಗೆ ಹಲವು ಸಂಗತಿಗಳನ್ನು ಚರ್ಚಿಸುವ ಅವಕಾಶಗಳು ನನಗೆ ದೊರಕಿದ್ದವು. ಅವರು ನೀಡಿದ ಜ್ಞಾನವು ಎಲ್ಲೆಡೆ ಪಸರಿಸಬೇಕು’ ಎಂದರು. 

ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ‘ಗೋವಿಂದಾಚಾರ್ಯ ಅವರು ಸಾಮಾಜಿಕ ಸಂತ. ಅವರು ತೋರಿಸಿದ ಮಾರ್ಗ, ನಿರ್ದೇಶನಗಳನ್ನು ಅನುಸರಿಸಬೇಕು’ ಎಂದು ಹೇಳಿದರು. 

ವಿದ್ವಾಂಸ ವಿನಯ ವಾರಣಾಸಿ ಅವರು ‘ಗೋವಿಂದ ನಾಮ ಜಿಜ್ಞಾಸೆ’ ವಿಷಯದ ಮೇಲೆ ಉಪನ್ಯಾಸ ನೀಡಿದರು. ಉಡುಪಿಯ ಬನ್ನಂಜೆ ರಾಘವೇಂದ್ರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು. ಬನ್ನಂಜೆ ಗೋವಿಂದಾಚಾರ್ಯ ಅವರ ಪುತ್ರಿ ವೀಣಾ ಬನ್ನಂಜೆ ಉಪಸ್ಥಿತರಿದ್ದರು.