ADVERTISEMENT

‘ಸಸಿಗಳ ನಾಶ: ವಾರ ಕಳೆದರೂ ಕ್ರಮವಿಲ್ಲ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 20:11 IST
Last Updated 16 ಸೆಪ್ಟೆಂಬರ್ 2020, 20:11 IST

ಬೆಂಗಳೂರು: ಅರಣ್ಯ ಇಲಾಖೆಗೆ ಸೇರಿದ್ದ ಜಾಗದಲ್ಲಿ ನೆಟ್ಟಿದ್ದ 250 ಸಸಿಗಳನ್ನು ರಾತ್ರೋರಾತ್ರಿ ಕಿತ್ತೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ ಕಳೆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಬನ್ನೇರುಘಟ್ಟ ನೇಚರ್‌ ಕನ್ಸರ್ವೇಶನ್‌ ಟ್ರಸ್ಟ್‌ನ ಪದಾಧಿಕಾರಿಗಳು ದೂರಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತಿರುವ ಡೀಮ್ಡ್‌ ಅರಣ್ಯಪ್ರದೇಶದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಕೆಎಸ್‌ಆರ್‌ಪಿಎಫ್ ಸಿಬ್ಬಂದಿ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ವಾರದ ಹಿಂದೆ ಈ ಸಸಿಗಳನ್ನು ನೆಟ್ಟಿದ್ದರು.

‘ರಾಗಿಹಳ್ಳಿ ಪಂಚಾಯಿತಿಯ ಶಿವನಹಳ್ಳಿ ಗ್ರಾಮದ ಬಳಿ ಇರುವ ಈ ಜಾಗ ಅರಣ್ಯಪ್ರದೇಶಕ್ಕೆ ಸೇರಿದ್ದು. ಈ ಪ್ರದೇಶದ ಸಂರಕ್ಷಣೆ ಉದ್ದೇಶದಿಂದ ನೆಟ್ಟಿದ್ದ ಸಸಿಗಳನ್ನು ಸ್ಥಳೀಯರು ಕಿತ್ತು ಹಾಕಿದ್ದಾರೆ. ಸೌದೆ ಮತ್ತಿತರ ಉದ್ದೇಶಗಳಿಗೆ ಈ ಪ್ರದೇಶವನ್ನು ಬಳಸಿಕೊಳ್ಳುವುದಕ್ಕಾಗಿ ಈ ಕೃತ್ಯ ಎಸಗಲಾಗಿದೆ. ಈ ಪ್ರದೇಶ ತಮಗೆ ಸೇರಿದ್ದು ಎಂದು ಅವರು ವಾದಿಸುತ್ತಾರೆ’ ಎಂದು ಟ್ರಸ್ಟ್‌ನ ಪದಾಧಿಕಾರಿಯೊಬ್ಬರು ದೂರಿದರು.

ADVERTISEMENT

‘ಒಂದೇ ರಾತ್ರಿಯಲ್ಲಿ ಎಲ್ಲ ಸಸಿಗಳನ್ನು ಬುಡಸಮೇತ ಕಿತ್ತು ಹಾಕಿದ್ದಾರೆ. ಅರಣ್ಯ ಇಲಾಖೆಯವರೂ ಈ ಬಗ್ಗೆ ದೂರು ದಾಖಲಿಸಿದ್ದಾರೆ.ಕಳೆದ 8ರಂದು ನಾವು ಬನ್ನೇರುಘಟ್ಟ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೂ ಕ್ರಮ ಕೈಗೊಂಡಿಲ್ಲ’ ಎಂದು ಅವರು ಹೇಳಿದರು.

‘ದೂರು ನೀಡಿದಾಗ, ಸ್ವೀಕೃತಿ ಪತ್ರವನ್ನು ಕೂಡ ಇನ್‌ಸ್ಪೆಕ್ಟರ್ ಕೊಡಲಿಲ್ಲ. ಕೊನೆಗೆ ಜಿಲ್ಲಾ ವರಿಷ್ಠಾಧಿಕಾರಿಗೆ ಕರೆ ಮಾಡಿ, ಸ್ವೀಕೃತಿ ಪತ್ರ ತೆಗೆದುಕೊಳ್ಳಬೇಕಾಯಿತು’ ಎಂದು ಅವರು ಹೇಳಿದರು.

‘ಸ್ಥಳೀಯ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಬನ್ನೇರುಘಟ್ಟ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಲಾಯಿತು. ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.