ADVERTISEMENT

ಬನ್ನೇರುಘಟ್ಟ: ಜ್ಯೂಸ್‌ ಮಳಿಗೆಯಲ್ಲಿ ಶೌಚಾಲಯದ ನಲ್ಲಿ ನೀರು ಬಳಕೆ?

ಬನ್ನೇರುಘಟ್ಟ ಜೈವಿಕ ಉದ್ಯಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:01 IST
Last Updated 31 ಜನವರಿ 2019, 20:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ಟಿಕೆಟ್‌ ವಿತರಣಾ ಕೇಂದ್ರದ ಬಳಿ ಇರುವ ಶೌಚಾಲಯದ ನಲ್ಲಿ ನೀರನ್ನು ಜ್ಯೂಸ್‌ ಮಳಿಗೆಗಳು ಬಳಸುತ್ತಿವೆಯೇ?

ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಸೆರೆ ಹಿಡಿದಿರುವ ವಿಡಿಯೊ ಇಂತಹ ಸಂದೇಹವನ್ನು ಹುಟ್ಟುಹಾಕಿದೆ. ಕಳೆದ ಭಾನುವಾರ ಪ್ರವಾಸಿಗರೊಬ್ಬರು ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ್ದಾಗ ಬಾಲಕನೊಬ್ಬ ಶೌಚಾಲಯದ ನಲ್ಲಿ ನೀರನ್ನು ಕೈತೊಳೆಯುವ ಬೇಸಿನ್‌ಗೆ ಬಿಟ್ಟು, ಅದರ ಮೂಲಕ ಪ್ಲಾಸ್ಟಿಕ್‌ ಕ್ಯಾನ್‌ಗೆ ತುಂಬಿಸಿಕೊಳ್ಳುತ್ತಿದ್ದ. ಈ ದೃಶ್ಯ ಸೆರೆ ಹಿಡಿದಿದ್ದ ಪ್ರವಾಸಿಗರೊಬ್ಬರು ಈ ವಿಚಾರವನ್ನು ಜೈವಿಕ ಉದ್ಯಾನದ ಆಡಳಿತದ ಗಮನಕ್ಕೆ ತಂದಿದ್ದರು.

‘ನಾನು ಬಾಲಕನಲ್ಲಿ ವಿಚಾರಿಸಿದಾಗ ಆತ ಕಬ್ಬಿನ ಹಾಲು ತಯಾರಿಸುವ ಮಳಿಗೆಯಲ್ಲಿ ಕೆಲಸಕ್ಕಿರುವುದಾಗಿ ತಿಳಿಸಿದ’ ಎಂದು ದೂರು ನೀಡಿದ್ದವರು ತಿಳಿಸಿದ್ದರು.

ADVERTISEMENT

‘ಈ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜೈವಿಕ ಉದ್ಯಾನದ ವಲಯ ಅರಣ್ಯ ಅಧಿಕಾರಿಯೊಬ್ಬರಿಗೆ ಸೂಚಿಸಿದ್ದೇವೆ’ ಎಂದು ಜೈವಿಕ ಉದ್ಯಾನದ ಡಿಸಿಎಫ್‌ ಕುಶಾಲಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶೌಚಾಲಯದ ನೀರನ್ನು ಕಬ್ಬಿನ ಹಾಲಿಗೆ ಬೆರೆಸಲು ಬಳಸುತ್ತಿದ್ದರು ಎಂದು ದೂರು ನೀಡಿದವರು ಹೇಳಿಲ್ಲ. ಯಂತ್ರವನ್ನು ತೊಳೆಯಲು ಈ ನೀರನ್ನು ಬಳಸಿರಬಹುದು. ಆದರೆ, ಪ್ರವಾಸಿಗರ ಆರೋಗ್ಯ ನಮಗೆ ಮುಖ್ಯ. ಇಲ್ಲಿನ ಮಳಿಗೆಗಳು, ಹೋಟೆಲ್‌ಗಳು ಶುಚಿತ್ವ ಕಾಪಾಡಬೇಕು ಎಂಬುದಾಗಿ ಸೂಚಿಸಿದ್ದೇವೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.