ADVERTISEMENT

ವಿಡಿಯೊ: ಬನ್ನೇರುಘಟ್ಟದಲ್ಲಿ ಸಫಾರಿ ವಾಹನದ ಮೇಲೆ ಚಿರತೆ ದಾಳಿ; ಮಹಿಳೆಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 14:56 IST
Last Updated 13 ನವೆಂಬರ್ 2025, 14:56 IST
<div class="paragraphs"><p>ವಿಡಿಯೊ: ಬನ್ನೇರುಘಟ್ಟದಲ್ಲಿ ಸಫಾರಿ ವಾಹನದ ಮೇಲೆ ಚಿರತೆ ದಾಳಿ; ಮಹಿಳೆಗೆ ಗಾಯ</p></div>

ವಿಡಿಯೊ: ಬನ್ನೇರುಘಟ್ಟದಲ್ಲಿ ಸಫಾರಿ ವಾಹನದ ಮೇಲೆ ಚಿರತೆ ದಾಳಿ; ಮಹಿಳೆಗೆ ಗಾಯ

   

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಗುರುವಾರ ಮಧ್ಯಾಹ್ನ ಸಫಾರಿ ವಾಹನದ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ವಾಹನದ ಕಿಟಕಿ ಪಕ್ಕದಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. 

ಸಫಾರಿ ವಾಹನದ ಕಿಟಕಿಯ ಪಕ್ಕ ಕುಳಿತಿದ್ದ ಚೆನ್ನೈನ ವಹೀದಾ ಬಾನು (50) ಎಂಬ ಮಹಿಳೆಯ ಕೈಗೆ ಚಿರತೆ ಪರಿಚಿದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ADVERTISEMENT

ವಹೀದಾ ಬಾನು ಪತಿ ಮತ್ತು ಮಗನೊಂದಿಗೆ ಬನ್ನೇರುಘಟ್ಟ ಸಫಾರಿ ವೀಕ್ಷಣೆಗೆ ಬಂದಿದ್ದರು. ಸಫಾರಿ ವಾಹನದ ಕಿಟಕಿ ತೆರೆದು ಚಿರತೆಗಳನ್ನು ನೋಡುವಾಗ ವಾಹನದ ಮುಂದೆ ರಸ್ತೆಯಲ್ಲಿ ಕುಳಿತಿದ್ದ ಚಿರತೆಯೊಂದು ಏಕಾಏಕಿ ದಾಳಿ ನಡೆಸಿದೆ.

ವಾಹನದ ಕಿಟಕಿಗೆ ಅಳವಡಿಸಿದ್ದ ಕಬ್ಬಿಣದ ಜಾಲರಿ ನಡುವಿನ ಜಾಗದಿಂದ ಕಾಲು ಮತ್ತು ಮೂತಿ ತೂರಿಸಿದೆ. ಕಾಲುಗಳಿಂದ ಮಹಿಳೆಯ ಕೈಗಳನ್ನು ಹಿಡಿದು, ಬಾಯಿ ಹಾಕಿದೆ. ತಕ್ಷಣ ಅಕ್ಕಪಕ್ಕದವರು ಮಹಿಳೆಯ ಕೈ ಹಿಡಿದು ಎಳೆದು ಕೊಂಡಿದ್ದಾರೆ. ಮಹಿಳೆ ಧರಿಸಿದ್ದ ಸೆಲ್ವಾರ್‌ ಕಮೀಜ್‌ ತೋಳಿನ ಬಟ್ಟೆ ಚಿರತೆ ಬಾಯಿಯಲ್ಲಿ ಉಳಿದುಕೊಂಡಿದೆ. ಕೆಲ ಹೊತ್ತು ಬಟ್ಟೆಯನ್ನೇ ಚಿರತೆ ಬಾಯಿಂದ ನೆಕ್ಕುತ್ತ ನಿಂತಿತ್ತು.

ಮಹಿಳೆ ಕೈಗೆ ಚಿರತೆ ಪರಿಚಿದ ಗಾಯಗಳಾಗಿದ್ದು, ಜಿಗಣಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು  ಪ್ರಥಮ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಬೆನ್ನಲ್ಲೇ ಹವಾನಿಯಂತ್ರಿತ ವ್ಯವಸ್ಥೆ ಇಲ್ಲದ ಬಸ್‌ ಸಫಾರಿಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.

ಸಫಾರಿ ವಾಹನದ ಮೇಲೆ ಚಿರತೆ ದಾಳಿ ನಡೆಸಿರುವುದು ದುರದೃಷ್ಟಕರ. ಚಿರತೆ ಆಕಸ್ಮಿಕವಾಗಿ ಬಸ್‌ ಮೇಲೆ ಹತ್ತಲು ಪ್ರಯತ್ನಿಸಿದಾಗ ವಹೀದಾ ಬಾನು ಅವರ ಕೈಗೆ ಗಾಯವಾಗಿದೆ. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸಣ್ಣಪುಟ್ಟ ಗಾಯ ಹೊರತುಪಡಿಸಿ ಅವರು ಆರೋಗ್ಯವಾಗಿದ್ದಾರೆ ಎಂದು ಬನ್ನೇರುಘಟ್ಟ ಜೈವಿಕೆ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.

ಹಿಂದಿನ ಚಿರತೆ ದಾಳಿಯಿಂದ ಎಚ್ಚೆತ್ತು ಎಲ್ಲಾ ಸಫಾರಿ ವಾಹನಗಳ ಚಾಲಕರಿಗೆ ಎಚ್ಚರಿಕೆ ನೀಡಲಾಗಿತ್ತು. ಚಿರತೆ ಸಫಾರಿಯೊಳಗೆ  ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಸಮಯದಲ್ಲಿ ಬಸ್‌ಗಳ ಸಂಪೂರ್ಣ ಸುರಕ್ಷತೆ ಹಾಗೂ ಸಂದರ್ಶಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕನ ಮೇಲೆ ದಾಳಿ ನಡೆದಿತ್ತು: ಮೂರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಸಫಾರಿಯ ಪ್ರವಾಸಿಗರ ಮೇಲೆ ಚಿರತೆ ದಾಳಿ ನಡೆಸಿದೆ.

ಆಗಸ್ಟ್ 15 ರಂದು ಸಫಾರಿ ವೀಕ್ಷಣೆಗೆ ಬಂದಿದ್ದ ಬೀದರ್‌ನ 12 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಈ ಘಟನೆ ನಂತರ ಬನ್ನೇರುಘಟ್ಟ ಉದ್ಯಾನದ ಸಫಾರಿ ವಾಹನಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಜಾಲರಿಗಳನ್ನು ಅಳವಡಿಸಲಾಗಿತ್ತು. 

ನಡೆದದ್ದು ಏನು?

ಸಫಾರಿ ವಾಹನ ಹೋಗುವ ಉದ್ಯಾನದ ರಸ್ತೆಯಲ್ಲಿ ಒಂದು ಹಾಗೂ ಪಕ್ಕದ ಹುಲ್ಲುಗಾವಲಿನ ಮರದ ನೆರಳಿನಲ್ಲಿ ಮೂರ‍್ನಾಲ್ಕು ಚಿರತೆಗಳು ವಿಶ್ರಾಂತಿ ಪಡೆಯುತ್ತಿದ್ದವು.

ಸಫಾರಿ ವಾಹನ ಚಾಲಕ ಅಲ್ಲಿಯೇ ಹೋಗಿ ವಾಹನ ನಿಲ್ಲಿಸಿ ಚಿರತೆ ತೋರಿಸಿದ್ದ. ವಾಹನದಲ್ಲಿದ್ದ ಪ್ರವಾಸಿಗರು  ಮೊಬೈಲ್‌ ಕ್ಯಾಮರಾಗಳಲ್ಲಿ ಚಿರತೆಗಳ ವಿಡಿಯೊ ಹಾಗೂ ಚಿತ್ರ ಸೆರೆ ಹಿಡಿಯಲು ಮುಂದಾದರು.

ಮರದ ನೆರಳಿನಲ್ಲಿ ಮಲಗಿದ್ದ ಮೂರು ಚಿರತೆಗಳು ಸಫಾರಿ ವಾಹನದ ಬಗ್ಗೆ ಲಕ್ಷ್ಯವಹಿಸಿದೆ ತಮ್ಮಷ್ಟಕ್ಕೆ ತಾವು ಇದ್ದವು. ಆದರೆ, ವಾಹನದ ಮುಂದೆ ರಸ್ತೆಯಲ್ಲಿ ಕುಳಿತಿದ್ದ ಚಿರತೆ ನಿಧಾನವಾಗಿ ಎದ್ದು ವಾಹನ ಬಾಗಿಲು ಬಳಿ ಬಂದಿದೆ. ನಂತರ ವಾಹನದ ಪಕ್ಕಕ್ಕೆ ಚಲಿಸಿ ಕಿಟಕಿ ಪಕ್ಕ ಕುಳಿತಿದ್ದ ಮಹಿಳೆಯ ಕೈಗೆ ಬಾಯಿ ಹಾಕಿದೆ. ವಾಹನ ಬಾಗಿಲು ಪಕ್ಕದ ಕಿಟಕಿಯಲ್ಲಿ ಹಸುಳೆಯೊಂದು ಕೈ ಇಟ್ಟಿತ್ತು. 

ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಸಫಾರಿ ವಾಹನಗಳ ಗಾಜಿನ ಕಿಟಕಿ, ಚಾಲಕನ ಮುಂಭಾಗದ ಗಾಜಿನ ಮೇಲೆ ಕಬ್ಬಿಣದ ಜಾಲರಿಗಳನ್ನು ಅಳವಡಿಸಲಾಗಿದೆ.

ಕಿಟಕಿ ಮತ್ತು ಕಬ್ಬಿಣದ ಜಾಲರಿ ನಡುವೆ ಒಬ್ಬರು ಸರಳವಾಗಿ ಕೈ ತೂರಿಸಬಹುದಾಷ್ಟು ಜಾಗ ಇದೆ. ಈ ಜಾಗದಿಂದಲೇ ಚಿರತೆ ತನ್ನ ಕಾಲು, ಮುಖವನ್ನು ತೂರಿಸಿ ಮಹಿಳೆ ಕೈಯನ್ನು ಹಿಡಿದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.