ಬೆಂಗಳೂರು: ‘ಕಮಲ್ ಹಾಸನ್ ಅವರು ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಿರುವುದು ಅಸಂಬದ್ಧವಾಗಿದೆ. ಅಧ್ಯಯನವಿಲ್ಲದೇ ಬೀಸು ಹೇಳಿಕೆಗಳನ್ನು ಕೊಡುವುದು ತಪ್ಪು‘ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಎಂದು ಹೇಳಿದ್ದಾರೆ
‘ಇಂತಹ ಹೇಳಿಕೆಗಳಿಂದ ಭಾಷಿಕರ ನಡುವೆ ವೈಷಮ್ಯ ಹುಟ್ಟಿಸುವುದು ಕಮಲ ಹಾಸನ್ ಅವರಿಗೆ ಶೋಭೆ ತರುವುದಿಲ್ಲ. ಇದು ಖಂಡನೀಯ. ಅವರು ತಪ್ಪನ್ನು ಒಪ್ಪಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ದ್ರಾವಿಡ ಭಾಷೆಗಳೆಲ್ಲ ಮೂಲ ದ್ರಾವಿಡದಿಂದ ಬಂದಿವೆಯೆಂದು ಭಾಷಾ ವಿಜ್ಞಾನಿಗಳು ಹೇಳಿದ್ದಾರೆ. ಕನ್ನಡ, ತಮಿಳು ಭಾಷೆಯಿಂದ ಹುಟ್ಟಿಲ್ಲ. ಕನ್ನಡವು ತಮಿಳು ಮೂಲವೂ ಅಲ್ಲ, ಸಂಸ್ಕೃತ ಮೂಲವೂ ಅಲ್ಲ. ಸ್ವತಂತ್ರ ದ್ರಾವಿಡ ಭಾಷೆ ಎನ್ನುವುದು ಭಾಷಾ ವಿಜ್ಞಾನಿಗಳ ಸ್ಪಷ್ಟ ಅಭಿಪ್ರಾಯವಾಗಿದೆ’ ಎಂದು ಹೇಳಿದ್ದಾರೆ.
‘ಕನ್ನಡ ಭಾಷೆಯು ಕ್ರಿಸ್ತ ಪೂರ್ವ ಮೂರನೇ ಶತಮಾನದಲ್ಲೇ ಬಳಕೆಯಲ್ಲಿ ಇತ್ತು ಎಂದು ಕೆಲವು ಸಂಶೋಧಕರು ಹೇಳಿದ್ದಾರೆ. ಕ್ರಿಸ್ತ ಪೂರ್ವ ಎರಡನೇ ಶತಮಾನದ ಗ್ರೀಕ್ ಪ್ರಹಸನದಲ್ಲಿ ಕನ್ನಡ ಪದ ಇರುವುದನ್ನೂ ಗುರುತಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಅವರು ಕ್ರಿಸ್ತ ಪೂರ್ವ ಎರಡನೇ ಶತಮಾನದಿಂದಲೇ ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸಿದ್ದಾರೆ‘ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.