ADVERTISEMENT

ಸಮಾಜದಲ್ಲಿ ಬದಲಾವಣೆ ತಂದ ಬರಗೂರರ ಸಾಹಿತ್ಯ: ಎಚ್‌.ಎನ್. ನಾಗಮೋಹನ ದಾಸ್

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ ದಾಸ್ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 20:30 IST
Last Updated 12 ಮಾರ್ಚ್ 2022, 20:30 IST
ಎಚ್.ಎಸ್. ರಾಘವೇಂದ್ರರಾವ್ ಅವರು ‘ಬೆವರು ನನ್ನ ದೇವರು’ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಮಾಡಿದರು. (ಎಡದಿಂದ ಬಲಕ್ಕೆ) ಗಾಯಕಿ ಶಮಿತಾ ಮಲ್ನಾಡ್, ಚಲನಚಿತ್ರ ನಟಿಯರಾದ ರೇಖಾ, ಹರಿಪ್ರಿಯಾ, ಬರಗೂರರ ಮೊಮ್ಮಗ ಆಕಾಂಕ್ಷ್, ಬರಗೂರು ರಾಮಚಂದ್ರಪ್ಪ, ಎಚ್‌.ಎನ್. ನಾಗಮೋಹನ ದಾಸ್, ಬಸವರಾಜ ಕಲ್ಗುಡಿ ಹಾಗೂ ಪ್ರಕಾಶಕ ಗಣೇಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಎಚ್.ಎಸ್. ರಾಘವೇಂದ್ರರಾವ್ ಅವರು ‘ಬೆವರು ನನ್ನ ದೇವರು’ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಮಾಡಿದರು. (ಎಡದಿಂದ ಬಲಕ್ಕೆ) ಗಾಯಕಿ ಶಮಿತಾ ಮಲ್ನಾಡ್, ಚಲನಚಿತ್ರ ನಟಿಯರಾದ ರೇಖಾ, ಹರಿಪ್ರಿಯಾ, ಬರಗೂರರ ಮೊಮ್ಮಗ ಆಕಾಂಕ್ಷ್, ಬರಗೂರು ರಾಮಚಂದ್ರಪ್ಪ, ಎಚ್‌.ಎನ್. ನಾಗಮೋಹನ ದಾಸ್, ಬಸವರಾಜ ಕಲ್ಗುಡಿ ಹಾಗೂ ಪ್ರಕಾಶಕ ಗಣೇಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜಗತ್ತಿನಲ್ಲಿ ಯಾವುದೇ ಕ್ರಾಂತಿಯೂ ತರಲಾಗದ ಬದಲಾವಣೆಗಳನ್ನು ಪುಸ್ತಕಗಳು ತಂದಿವೆ. ಬರಗೂರು ರಾಮಚಂದ್ರಪ್ಪ ಅವರ ಸಾಹಿತ್ಯ ಮತ್ತು ಸಿನಿಮಾದಿಂದ ಈ ಸಮಾಜದಲ್ಲಿ ಒಂದಷ್ಟು ಬದಲಾವಣೆಗಳು ಸಾಧ್ಯವಾಗಿವೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ ದಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನ ಅಭಿರುಚಿ ಪ್ರಕಾಶನ ನಗರದಲ್ಲಿ ಶನಿವಾರ ಹಮ್ಮಿಕೊಂಡ ಬರಗೂರು ರಾಮಚಂದ್ರಪ್ಪ ಅವರ ‘ಬೆವರು ನನ್ನ ದೇವರು’ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜೀವನದಲ್ಲಿ ನೈತಿಕ ಮೌಲ್ಯ ಬೆಳೆಸಿಕೊಂಡರೆ ಅದರ ಸುತ್ತ ಹತ್ತಾರು ಮೌಲ್ಯಗಳು ಹುಟ್ಟಿಕೊಳ್ಳುತ್ತವೆ. ಬರಗೂರು ಅವರು ಜೀವನದ ಉದ್ದಕ್ಕೂ ಅನೇಕ ಪೆಟ್ಟು ತಿಂದು ಆದರ್ಶರಾದರು. ಕುಗ್ರಾಮದಲ್ಲಿ ಹುಟ್ಟಿದ ಅವರು, ಪ್ರೇಮ ವಿವಾಹ, ಬಂಡಾಯ ಸಾಹಿತ್ಯ, ಸಿನಿಮಾ.... ಹೀಗೆ ಬದುಕಿನ ಉದ್ದಕ್ಕೂ ಕಷ್ಟಗಳನ್ನು ಎದುರಿಸುತ್ತಾ ಸಾಗಿದರು.ನಂಬಿದ ತತ್ವಗಳ ನಡುವೆ ಬದುಕುನಡೆಸಿಮಾದರಿಯಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ವಿಮರ್ಶಕಎಚ್.ಎಸ್. ರಾಘವೇಂದ್ರರಾವ್, ‘ಈ ಹಿಂದೆ ಪುಸ್ತಕಗಳನ್ನು ಓದಿದ ಬಳಿಕ ಲೇಖಕರ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ನಿರ್ಧಾರಕ್ಕೆ ಬರಲಾಗುತ್ತಿತ್ತು. ಆದರೆ, ಈಗ ಲೇಖಕರ ವ್ಯಕ್ತಿತ್ವದ ಆಧಾರದಲ್ಲಿ ಪುಸ್ತಕ ಓದುವುದು ಅಥವಾ ಓದದಿರುವುದು ದುರಂತ. ಪುಸ್ತಕಗಳನ್ನು ಓದದೆಯೇಅಭಿಪ್ರಾಯ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಫೇಸ್‌ಬುಕ್‌ಗಳಲ್ಲಿ ಲೈಕ್ ನೀಡುವ ಉತ್ಸಾಹ ಪುಸ್ತಕಗಳನ್ನು ಓದುವುದರಲ್ಲಿ ಇಲ್ಲ.ಬರಗೂರು ಅವರು ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಇದೇ ವೇಳೆ ಹೊಸತನಕ್ಕೆ ತೆರೆದುಕೊಂಡಿದ್ದಾರೆ.ವೈಚಾರಿಕತೆ ಮತ್ತು ಭಾವುಕತೆಯನ್ನು ಅವರಲ್ಲಿ ಕಾಣಬಹುದು’ ಎಂದರು.

ವಿಮರ್ಶಕ ಬಸವರಾಜ ಕಲ್ಗುಡಿ, ‘ಬರಗೂರು ಅವರು ಕಾಯಕ ಮತ್ತು ಶ್ರಮದ ಪರಿಕಲ್ಪನೆಯನ್ನು ನಿರಂತರವಾಗಿ ತಮ್ಮ ಕೃತಿಯಲ್ಲಿ ತರುತ್ತಾ ಬಂದಿದ್ದಾರೆ. ಬರವಣಿಗೆಯಲ್ಲಿ ಗಾಂಧೀಜಿ ಹಾಗೂ ಕುವೆಂಪು ಅವರನ್ನು ಮುಖಾಮುಖಿ ಮಾಡಿಸಿಕೊಂಡಿದ್ದಾರೆ. ಆಧುನಿಕ ಕಾಲದಲ್ಲಿ ಶುದ್ಧ ಗ್ರಾಮೀಣ ಸಂವೇದನೆಯನ್ನು ಅವರು ಸೆರೆ ಹಿಡಿದಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.