ADVERTISEMENT

ಕನ್ನಡ ಶಿಕ್ಷಕರ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಆಹ್ವಾನಿಸಿ: ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:30 IST
Last Updated 22 ಮಾರ್ಚ್ 2022, 19:30 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ‘ಸಾರ್ವಜನಿಕ ಶಿಕ್ಷಣ ಇಲಾಖೆಯು 6ರಿಂದ 8ನೇ ತರಗತಿಗಳ ಬೋಧನೆಗಾಗಿ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಡಿ ಕನ್ನಡ‌ಅಧ್ಯಾಪಕರಿಗೆ ಅವಕಾಶ ಕಲ್ಪಿಸದಿರುವುದು ಅಚ್ಚರಿಯ ಸಂಗತಿ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿರುವ ಅವರು,‘ಇಂಗ್ಲಿಷ್, ಗಣಿತ, ಸಮಾಜ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇಲ್ಲಿ ಕನ್ನಡ ವಿಷಯವನ್ನೇ ಸೇರಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ಹಿಂದೆ ಸಮಾಜ ವಿಜ್ಞಾನ ಅಧ್ಯಾಪಕರಿಗೇ ಕನ್ನಡ ಬೋಧಿಸಲು ಹೇಳಲಾಗಿತ್ತು ಎಂದು ತಿಳಿದುಬಂದಿದೆ. ಇದು ನಿಜವಾಗಿದ್ದರೆ ಅನ್ಯಾಯ. ಐಚ್ಛಿಕ ಇಂಗ್ಲಿಷ್ ಮತ್ತು ಸಾಹಿತ್ಯದಲ್ಲಿಪದವಿ ಪೂರೈಸಿದವರಿಗೆ ಮಾತ್ರ ಇಂಗ್ಲಿಷ್‌ ಬೋಧನೆಗೆ ಅರ್ಜಿ ಹಾಕಲು ಹೇಳಲಾಗಿದೆ. ಕನ್ನಡ ವಿಷಯಕ್ಕೂ ಕನ್ನಡ ಮತ್ತು ಸಾಹಿತ್ಯವನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದವರಿಗೆ ಮಾತ್ರವೇ ಅರ್ಹರೆಂದು ಪರಿಗಣಿಸಿ, ಅರ್ಜಿ ಆಹ್ವಾನಿಸಬೇಕಿತ್ತು. ಆದರೆ, ಪ್ರಕಟಣೆಯಲ್ಲಿ ಕನ್ನಡ ಅಧ್ಯಾಪಕ ಹುದ್ದೆಗಳ ಪ್ರಸ್ತಾವವೇ ಇಲ್ಲ’ ಎಂದು ದೂರಿದ್ದಾರೆ.

ADVERTISEMENT

‘ಕನ್ನಡ ಬೋಧನೆ ಹಾಗೂ ಕನ್ನಡ ಪದವೀಧರರ ಅಗತ್ಯವಿಲ್ಲವೆಂದು ತಿಳಿದಿದ್ದರೆ ಇದು ಕನ್ನಡಕ್ಕೆ ಮತ್ತು ಕನ್ನಡ ಪದವೀಧರರಿಗೆ ಮಾಡಿದ ಅನ್ಯಾಯ. ಇದು ಐಚ್ಛಿಕ ಕನ್ನಡ ಪದವೀಧರರನ್ನು ಹುದ್ದೆಯ ಅವಕಾಶದಿಂದ ವಂಚಿಸಿದಂತೆ’ ಎಂದಿದ್ದಾರೆ.

‘ಕನ್ನಡಕ್ಕೆ ಆಗಿರುವ ಈ ಅನ್ಯಾಯವನ್ನುಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೂಡಲೇ ಸರಿಪಡಿಸಬೇಕು. ಕನ್ನಡ ಅಧ್ಯಾಪಕರ ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿ ಆಹ್ವಾನಿಸಬೇಕು. ಕನ್ನಡ ವಿಷಯವನ್ನು ಐಚ್ಛಿಕ ಕನ್ನಡ ಪದವೀಧರ ಅರ್ಹ ಅಭ್ಯರ್ಥಿಗಳೇ ಬೋಧಿಸಬೇಕು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.