ADVERTISEMENT

ರೈತ ಹೋರಾಟಕ್ಕೆ ಬರಗೂರು ರಾಮಚಂದ್ರಪ್ಪ, ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಬೆಂಬಲ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 20:46 IST
Last Updated 7 ಡಿಸೆಂಬರ್ 2020, 20:46 IST

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ ಬೆಂಬಲ ಸೂಚಿಸಿದೆ.

ಸಂಘಟನೆಯ ವಿನಯ್ ಕೆ.ಶ್ರೀನಿವಾಸ,‘ರೈತರ ಹೋರಾಟಕ್ಕೆ ನಮ್ಮ ಒಕ್ಕೂಟದ ಬೆಂಬಲವಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರು, ವರ್ತಕರು ಹಾಗೂ ಬೀದಿ ವ್ಯಾಪಾರಿಗಳ ನಡುವೆ ಪರಸ್ಪರ ಸಂಬಂಧವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತರಲು ಹೊರಟಿರುವ ಕಾನೂನುಗಳಿಂದ ಕಾರ್ಪೊರೇಟ್ ಕೃಷಿ ಜಾರಿಗೆ ಬರುತ್ತದೆ. ಇದರಿಂದ ರೈತರು ಮಾತ್ರವಲ್ಲದೆ, ಬೀದಿ ವ್ಯಾಪಾರಿಗಳು ಹಾಗೂ ಸಣ್ಣ ವರ್ತಕರೂ ಬೀದಿ ಪಾಲಾಗುತ್ತಾರೆ’ ಎಂದು ತಿಳಿಸಿದ್ದಾರೆ.

‘ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ಮತ್ತು ವಿದ್ಯುತ್ ಖಾಸಗೀಕರಣ ಕಾಯ್ದೆಗಳ ತಿದ್ದುಪಡಿ ಕೈಬಿಡಬೇಕು. ಎಪಿಎಂಸಿಯನ್ನು ಭ್ರಷ್ಟಮುಕ್ತಗೊಳಿಸಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸಬೇಕು. ಕಾರ್ಮಿಕ ಕಾಯ್ದೆಗಳನ್ನು ಕಾರ್ಮಿಕರ ಪರವಾಗಿ ಬಲಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಬಂದ್‍ಗೆ ಬೆಂಬಲ: ರೈತ ಸಂಘಟನೆಗಳು ಡಿ.8ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ಬೆಂಬಲ ತಿಳಿಸಿದೆ.

ವೇದಿಕೆಯ ಅಧ್ಯಕ್ಷ ಅಧ್ಯಕ್ಷ ಬಿ.ಆರ್.ಮಂಜುನಾಥ್, ‘ಕಾರ್ಪೋರೇಟ್ ಪರ, ರೈತ ವಿರೋಧಿಯಾಗಿರುವ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ನಮ್ಮ ಬೆಂಬಲವಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ದಮನಕಾರಿ ನೀತಿಗಳು, ಅಪಪ್ರಚಾರದ ಅಸಹ್ಯ ಯತ್ನಗಳು, ಒಡೆದು ಆಳುವ ಕುತಂತ್ರಗಳನ್ನುನಡೆಸುತ್ತಿದೆ. ರೈತರ ಹೋರಾಟ ಹತ್ತಿಕ್ಕುವಸರ್ಕಾರವನ್ನು ವಿರೋಧಿಸಿನಡೆಯುವ ಚರಿತ್ರಾರ್ಹ ಹೋರಾಟ ಹಾಗೂ ಬಂದ್‍ಗೆ ಬೆಂಬಲ ನೀಡುತ್ತೇವೆ’ ಎಂದಿದ್ದಾರೆ.

ಬರಗೂರು ರಾಮಚಂದ್ರಪ್ಪ ಬೆಂಬಲ

‘ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬಂಡಾಯ ಸಾಹಿತ್ಯ ಸಂಘಟನೆ ಬೆಂಬಲಿಸುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

‘ಕೇಂದ್ರದ ಕೃಷಿ ವಿರೋಧಿ ಕಾಯ್ದೆಗಳು ದೇಶದ ಭೂಮಿ ಬೆಳಕನ್ನು ಬೂದಿ ಮಾಡುತ್ತವೆ. ಕೃಷಿ, ಶಿಕ್ಷಣ ಮುಂತಾದ ಕೆಲವು ಕ್ಷೇತ್ರಗಳು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದರೂ ಕೇಂದ್ರೀಕರಣ ನೀತಿಯ ಮೂಲಕ ಒಕ್ಕೂಟ ಪದ್ಧತಿಗೆ ಧಕ್ಕೆ ತರಲಾಗುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಮತ್ತು ರೈತರ ಸ್ವಾತಂತ್ರ್ಯವನ್ನು ಕಸಿದು, ಸ್ವಾತಂತ್ರ್ಯ ಕೊಡುತ್ತಿರುವುದಾಗಿ ಕಂಠಪಾಠ ಒಪ್ಪಿಸುತ್ತಿದೆ’ ಎಂದು ಟೀಕಿಸಿದ್ದಾರೆ.

‘ಬಂಡವಾಳಶಾಹಿ ಆರ್ಥಿಕ ನೀತಿ ನೀಡುವುದು ಬಂಡವಾಳಗಾರರ ಸ್ವಾತಂತ್ರ್ಯ. ಶ್ರಮಮೂಲ ಆರ್ಥಿಕ ನೀತಿ ನೀಡುವುದು ರೈತರು ಹಾಗೂ ಬಡವರ ಸ್ವಾತಂತ್ರ್ಯ. ಇದಕ್ಕೆ ಧಕ್ಕೆ ತರುವ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವುದು ನ್ಯಾಯಯುತ ಹೋರಾಟ. ಇದನ್ನು ಬಂಡಾಯ ಸಾಹಿತ್ಯ ಸಂಘಟನೆ ಬೆಂಬಲಿಸುತ್ತದೆ. ಹೊಸ ಬೆಳಕಿನ ಹಾದಿಗೆ ನಾಂದಿಯಾಗಲಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.