ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಪರವಾಗಿ ಎಂ.ಎಸ್. ಮದಭಾವಿ, ಗೊ.ರು. ಚನ್ನಬಸಪ್ಪ ಮತ್ತು ಎಂ.ಡಿ. ಪಲ್ಲವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆ.ವಿ. ನಾಗರಾಜಮೂರ್ತಿ, ಎಸ್. ಷಡಕ್ಷರಿ, ನಿರ್ಮಲಾನಂದನಾಥ ಸ್ವಾಮೀಜಿ, ಬಸವರಾಜ ಬೊಮ್ಮಾಯಿ, ವಿ. ಸೋಮಣ್ಣ, ಸಿ.ಸೋಮಶೇಖರ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಎಲ್ಲರನ್ನೂ ಒಗ್ಗೂಡಿಸುವ ವ್ಯಕ್ತಿಗಳು ಸಮಾಜಕ್ಕೆ ಅಗತ್ಯವಿದ್ದು, ಈ ಕಾರ್ಯ ಮಾಡಿದ ಬಸವಣ್ಣ ಕಾಲ ಕಳೆದಂತೆ ಪ್ರಸ್ತುತವಾಗುತ್ತಾ ಹೋಗುತ್ತಾರೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಬಸವ ವೇದಿಕೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅವರಿಗೆ ‘ಬಸವಶ್ರೀ ಪ್ರಶಸ್ತಿ’, ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಪರವಾಗಿ ಎಂ.ಎಸ್. ಮದಭಾವಿ ಮತ್ತು ಗಾಯಕಿ ಎಂ.ಡಿ. ಪಲ್ಲವಿ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.
‘ಎಲ್ಲರನ್ನೂ ಒಳಗೊಂಡು ಬದುಕಿದವರು ಬಸವಣ್ಣ. ಅವರು ಜ್ಞಾನ ಪಸರಿಸುವ ಪೂರ್ವ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಿದರು. ಕಲುಷಿತ ವಾತಾವರಣ ಮೀರಿ ಸಮಾಜ ಬೆಳೆಸಿದರು. ವಿಚಾರವಾದಿಯಾಗಿದ್ದ ಅವರು, ಭಕ್ತಿ ಮತ್ತು ಜ್ಞಾನ ಬೆಳೆಸಿಕೊಂಡ ದಾರ್ಶನಿಕರಾಗಿದ್ದರು. ಕಾಲ ಕಳೆದಂತೆ ಅವರ ಮಹಾನ್ ಶಕ್ತಿ ಗೋಚರಿಸುತ್ತಿದೆ. ಬಸವಾದಿ ಶರಣರು ನೀಡಿದ ವಚನಗಳು ಆಧುನಿಕ ಕಾಲದಲ್ಲಿ ಯುವಜನರಿಗೆ ಅಗತ್ಯ’ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ‘ಜಾತಿ ರಹಿತ, ವರ್ಗ ರಹಿತ ಸಮಾಜದ ಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು ಬಸವಣ್ಣ. ಅವರು ವಿದ್ಯೆಯನ್ನೇ ಆಯುಧವಾಗಿ ಬಳಸಿಕೊಂಡು, ಶೋಷಿತರ, ಮಹಿಳೆಯರ ಉದ್ಧಾರಕ್ಕೆ ಶ್ರಮಿಸಿದರು’ ಎಂದು ಸ್ಮರಿಸಿದರು.
ಸಂಸದ ಬಸವರಾಜ ಬೊಮ್ಮಾಯಿ, ‘ಬಸವಣ್ಣ ಅವರು ಅಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯ, ಮೂಢನಂಬಿಕೆ ವಿರುದ್ಧ ಹೋರಾಡಿದರು. ಅವರ ವಿಚಾರಧಾರೆಗೆ ನ್ಯಾಯ ಒದಗಿಸುವಲ್ಲಿ ನಾವು ವಿಫಲವಾಗಿದ್ದು, ಈಗಲೂ ಸಮಾಜ ಈ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರತಿಯೊಂದು ಹರಿಜನ ಕೇರಿಯಲ್ಲಿ ಬಸವ ಜಯಂತಿ ನಡೆಯುವಂತಹ ಬದಲಾವಣೆಯಾದಲ್ಲಿ ಈ ನಾಡು ಉದ್ಧಾರ ಆಗುತ್ತದೆ’ ಎಂದರು.
ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಅಧ್ಯಕ್ಷರೂ ಆಗಿರುವ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ‘ಕಾಲಗರ್ಭದಲ್ಲಿ ಮಾಯವಾಗಿ ಹೋಗುತ್ತಿದ್ದ ವಚನ ಸಾಹಿತ್ಯವನ್ನು ಮತ್ತು ನೂರಾರು ಸಮುದಾಯಗಳಿಂದ ಬಂದ ವಚನಕಾರರನ್ನು ಬೆಳಕಿಗೆ ತಂದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ವಚನ ಸಾಹಿತ್ಯ ಸಂಶೋಧನೆಗೆ ಸಂಬಂಧಿಸಿದಂತೆ ಅವರು ಶ್ರೇಷ್ಠವಾದ ಕೆಲಸವನ್ನು ಮಾಡಿ ಹೋಗಿದ್ದಾರೆ’ ಎಂದು ಸ್ಮರಿಸಿದರು.
‘ಬಸವಣ್ಣ ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿರದೆ ವಿಶ್ವದ ಸಾಂಸ್ಕೃತಿಕ ನಾಯಕನಾಗಿದ್ದಾನೆ. ಆದ್ದರಿಂದ ಅಂತರರಾಷ್ಟ್ರೀಯ ಬಸವಣ್ಣ ಆಧ್ಯಾತ್ಮಿಕ ಕೇಂದ್ರವನ್ನು ಬೆಂಗಳೂರಿನಲ್ಲಿ ನಿರ್ಮಿಸಬೇಕು. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಬಸವ ಭವನ ನಿರ್ಮಾಣ ಮಾಡಬೇಕು. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಶ್ವವಿದ್ಯಾಲಯ ಪ್ರಾರಂಭಿಸಬೇಕು’ ಎಂದು ಬಸವ ವೇದಿಕೆ ಅಧ್ಯಕ್ಷ ಸಿ. ಸೋಮಶೇಖರ ಅವರು ಸರ್ಕಾರಕ್ಕೆ ಆಗ್ರಹಿಸಿದರು. ‘ಶರಣ ಸಾಹಿತ್ಯ ಪ್ರಸಾರ ಮಾಡುತ್ತಿರುವ ಬಸವ ಸಮಿತಿ ಶರಣ ಸಾಹಿತ್ಯ ಪರಿಷತ್ತಿಗೆ ಶಾಶ್ವತ ಅನುದಾನ ನೀಡಬೇಕು. ಶರಣ ತತ್ವಗಳನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.