
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಬಸವನಗುಡಿಯ ಎಂ.ಎನ್. ಕೃಷ್ಣರಾವ್ ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತಿದ್ದ ಉದ್ಯಮಿಯೊಬ್ಬರ ಮೇಲೆ ಏರ್‌ಗನ್‌ನಿಂದ ನಕಲಿ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕಾಲೇಜಿನ ವಿದ್ಯಾರ್ಥಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣರಾವ್ ಪಾರ್ಕ್ ಬಳಿ ನಿವಾಸಿ ಮೊಹಮ್ಮದ್ ಅಫ್ಜಲ್ ಎಂಬಾತನನ್ನು ಬಂಧಿಸಿ, ಮೂರು ಏರ್‌ಗನ್ ವಶಪಡಿಸಿಕೊಂಡಿದ್ದಾರೆ.
ಡಿ.10ರ ರಾತ್ರಿ ನರ್ತಕಿ, ಕರ್ಗಿಲ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕ ರಾಜಗೋಪಾಲ್ ಅವರು ಸ್ನೇಹಿತರೊಂದಿಗೆ ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಆಗ ಉದ್ಯಾನ ಬಳಿಯ ನಿವಾಸಿ ಅಫ್ಜಲ್ ಏರ್‌ಗನ್ ಅಭ್ಯಾಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ರಾಜಗೋಪಾಲ ಅವರ ಕುತ್ತಿಗೆಗೆ ಹೊಕ್ಕಿ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಸ್ನೇಹಿತರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ರಾಜಗೋಪಾಲ್ ಅವರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಉದ್ಯಾನ ಸಮೀಪದ ಮನೆಯಿಂದ ಗುಂಡು ಹಾರಿರುವುದು ಗೊತ್ತಾಗಿದೆ.
ಕನಕಪುರ ರಸ್ತೆಯ ಪ್ರೆಸ್ಟೀಜ್ ಸುಕ್ರಿ ಸೆರೆನಿಟಿ ಅಪಾರ್ಟ್‌ಮೆಂಟ್ ಬಳಿ ವಿದ್ಯಾರ್ಥಿಯನ್ನು ಬಂಧಿಸಿ, ಮೂರು ಏರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಮನೆಯೊಳಗೆ ಏರ್‌ಗನ್‌ನಿಂದ ಶೂಟಿಂಗ್ ಅಭ್ಯಾಸ ಮಾಡುವ ವೇಳೆ ಗುರಿ ತಪ್ಪಿ ಕಿಟಕಿಯಿಂದ ಗುಂಡು ಹೊರ ಹೋಗಿದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ವಿಚಾರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.