ADVERTISEMENT

12ಕ್ಕೆ ಏಳುವ ಪತ್ನಿ, ಕೆಲಸ ಮಾಡು ಎಂದಿದಕ್ಕೆ ಹಲ್ಲೆ: ಬಸವನಗುಡಿ ಠಾಣೆಗೆ ದೂರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 21:35 IST
Last Updated 13 ಮಾರ್ಚ್ 2023, 21:35 IST

ಬೆಂಗಳೂರು: ‘ನನ್ನ ಪತ್ನಿ ನಿತ್ಯವೂ ಮಧ್ಯಾಹ್ನ 12 ಗಂಟೆಗೆ ಏಳುತ್ತಾಳೆ. ಮನೆಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ಕೆಲಸ ಮಾಡು ಎಂದರೆ ಬೆದರಿಸುತ್ತಾಳೆ. ಸಂಬಂಧಿಕರನ್ನು ಕರೆಸಿ ಹೊಡೆಸಿದ್ದಾಳೆ’ ಎಂದು ಆರೋಪಿಸಿ ಕಂಪನಿಯೊಂದರ ಉದ್ಯೋಗಿ ಬಸವನಗುಡಿ ಠಾಣೆಗೆ ದೂರು ನೀಡಿದ್ದಾರೆ.

‘ಬಸವನಗುಡಿಯ 39 ವರ್ಷದ ನಿವಾಸಿಯೊಬ್ಬರು ದೂರು ನೀಡಿದ್ದಾರೆ. ಅವರ ಪತ್ನಿ ಹಾಗೂ ಸಂಬಂಧಿಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ದೂರಿನ ವಿವರ: ‘2017ರಲ್ಲಿ ಮದುವೆಯಾಗಿದೆ. ಪತ್ನಿ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಈ ವಿಷಯ ಮುಚ್ಚಿಟ್ಟು ನನ್ನ ಜೊತೆ ಮದುವೆ ಮಾಡಲಾಗಿದೆ. ಆರೋಗ್ಯ ಸಮಸ್ಯೆ ಎಂಬುದಾಗಿ ಹೇಳುವ ಪತ್ನಿ, ಮನೆಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ನನ್ನ ತಾಯಿಯೇ ಎಲ್ಲ ಕೆಲಸ ಮಾಡುವಂತಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

‘ರಾತ್ರಿ ಬೇಗನೆ ಮಲಗಿದರೂ ಮರುದಿನ ಮಧ್ಯಾಹ್ನ 12 ಗಂಟೆಗೆ ಪತ್ನಿ ಏಳುತ್ತಾಳೆ. ಕೆಲಸ ಮಾಡು ಎಂದರೆ, ತವರು ಮನೆಗೆ ಹೋಗುವುದಾಗಿ ಬೆದರಿಸುತ್ತಾಳೆ. ಈಕೆಯ ವರ್ತನೆಯಿಂದ ಮಾನಸಿಕವಾಗಿ ನೊಂದಿದ್ದೇನೆ.’

‘ಇತ್ತೀಚೆಗೆ ಪತ್ನಿ ಪುನಃ ತವರು ಮನೆಗೆ ಹೊರಟಿದ್ದಳು. ಬೇಡವೆಂದು ಹೇಳಿದ್ದೆ. ಅಷ್ಟಕ್ಕೆ ಸಂಬಂಧಿಕರನ್ನು ಮನೆಗೆ ಕರೆಸಿದ್ದ ಪತ್ನಿ, ನನಗೆ ಹೊಡೆಸಿದ್ದಾಳೆ’ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.