ADVERTISEMENT

ವಿಶ್ವ ಬಸವ ಜಯಂತಿ | ಜಗದ ಯುದ್ಧಕ್ಕೆ ಬಸವಣ್ಣ ಮದ್ದು: ಅರವಿಂದ ಜತ್ತಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 14:19 IST
Last Updated 30 ಏಪ್ರಿಲ್ 2025, 14:19 IST
ಕೆ. ಮೋಹನ್‌ದೇವ ಆಳ್ವ ಅವರಿಗೆ ‘ದಾಸೋಹರತ್ನ ಪ್ರಶಸ್ತಿ’ ಮತ್ತು ವಚನ ಸಂಗೀತಕ್ಕಾಗಿ ತೋಂಟಪ್ಪ ಉತ್ತಂಗಿ ಅವರಿಗೆ ಅತ್ತಾವರ ಬೀಡು ಕೋಳೂರು ಗುತ್ತು ದೇವ ಆಳ್ವ ಮತ್ತು ಕೊಡ್ಮಾಣ್ ಗುತ್ತು ವಿಟ್ಟಮ್ಮ ಆಳ್ವ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
–ಪ್ರಜಾವಾಣಿ ಚಿತ್ರ
ಕೆ. ಮೋಹನ್‌ದೇವ ಆಳ್ವ ಅವರಿಗೆ ‘ದಾಸೋಹರತ್ನ ಪ್ರಶಸ್ತಿ’ ಮತ್ತು ವಚನ ಸಂಗೀತಕ್ಕಾಗಿ ತೋಂಟಪ್ಪ ಉತ್ತಂಗಿ ಅವರಿಗೆ ಅತ್ತಾವರ ಬೀಡು ಕೋಳೂರು ಗುತ್ತು ದೇವ ಆಳ್ವ ಮತ್ತು ಕೊಡ್ಮಾಣ್ ಗುತ್ತು ವಿಟ್ಟಮ್ಮ ಆಳ್ವ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಸವಪ್ರಜ್ಞೆ ಇರುತ್ತಿದ್ದರೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರಗಾಮಿಗಳ ದಾಳಿ, ರಷ್ಯಾ – ಉಕ್ರೇನ್‌ ಯುದ್ಧಗಳು ನಡೆಯುತ್ತಿರಲಿಲ್ಲ. ಎಲ್ಲ ಹಿಂಸೆ, ಯುದ್ಧಗಳಿಗೆ ಬಸವಣ್ಣನ ತತ್ವದಲ್ಲಿ, ವಚನಗಳಲ್ಲಿ ಮದ್ದಿದೆ’ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದರು.

ಬುಧವಾರ ನಡೆದ ವಿಶ್ವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಯೆಯಿಲ್ಲದ ಧರ್ಮ ಯಾವುದಯ್ಯ ಎಂಬುದು ಅರ್ಥವಾಗಿದ್ದರೆ ಧರ್ಮದ ಹೆಸರಲ್ಲಿ ಯಾರೂ ಹಿಂಸೆಗೆ ಇಳಿಯುತ್ತಿರಲಿಲ್ಲ. ವಚನಗಳನ್ನು ಇಂದು ಎಲ್ಲರೂ ಇಂಪಾಗಿ ಹಾಡುತ್ತಾರೆ. ಆದರೆ, ವಚನ ಹಾಡಿಗೆ ಸೀಮಿತವಲ್ಲ. ಅವು ಬದುಕಿನಲ್ಲಿ ಅಳವಡಿಸಿಕೊಳ್ಳಲು ಇರುವಂಥವುಗಳು’ ಎಂದು ವಿಶ್ಲೇಷಿಸಿದರು.

ADVERTISEMENT

‘ಬಸವಣ್ಣ ಇವತ್ತು ವಿಶ್ವಕ್ಕೆ ಅರ್ಥವಾಗದೇ ಇರಬಹುದು. ಇನ್ನು ನೂರು ವರ್ಷಗಳ ಬಳಿಕವಾದರೂ ಜಗತ್ತಿಗೆ ಅರ್ಥವಾಗಲಿದೆ. ಆಗ ಎಲ್ಲರೂ ಬಸವಣ್ಣನ ಕಾಲಿಗೆ ಬೀಳಲಿದ್ದಾರೆ. ಈಗಾಗಲೇ ಜಪಾನಿ, ಜರ್ಮನ್‌, ಫ್ರೆಂಚ್‌, ನೇಪಾಳಿ ಸಹಿತ ಹಲವು ಭಾಷೆಗಳಿಗೆ ವಚನ ಸಂಪುಟ ಅನುವಾದಗೊಂಡಿವೆ. ವಿಶ್ವದ 68 ಕಡೆಗಳಲ್ಲಿ ಈ ದಿನ ಬಸವ ಜಯಂತಿ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ಬಸವ ಸಮತಿ ಟ್ರಸ್ಟ್‌ನ ಚುನಾಯಿತ ಸದಸ್ಯ ಕೆ. ಮೋಹನ್‌ದೇವ ಆಳ್ವ ಅವರಿಗೆ ‘ದಾಸೋಹ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಗೀತ ಕ್ಷೇತ್ರದ ಸಾಧನೆಗಾಗಿ ತೋಂಟಪ್ಪ ಉತ್ತಂಗಿ ಅವರಿಗೆ ಅತ್ತಾವರ ಬೀಡು ಕೋಳೂರು ಗುತ್ತು ದೇವ ಆಳ್ವ ಮತ್ತು ಕೊಡ್ಮಾಣ್‌ ಗುತ್ತು ವಿಟ್ಟಮ್ಮ ಆಳ್ವ ಸಂಸ್ಮರಣಾರ್ಥ ₹ 1 ಲಕ್ಷ ನಗದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವ ಸಮಿತಿ ಪ್ರಕಟಿಸಿರುವ ವಿವಿಧ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಬೇಲಿಮಠದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವರಾದ ಲೀಲಾವತಿ ಆರ್‌. ಪ್ರಸಾದ್‌, ರಾಣಿ ಸತೀಶ್‌, ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಬಿರಾದಾರ, ಐಲೈಟ್‌ ಚಾರಿಟಬಲ್‌ ಟ್ರಸ್ಟ್‌ನ ಅವಿನಾಶ್‌ ಪಾಳೇಗಾರ್, ಬಸವ ಸಮಿತಿ ಹಿರಿಯ ಉಪಾಧ್ಯಕ್ಷ ಪ್ರಭುದೇವ ಜೆ. ಚಿಗಟೇರಿ, ಪ್ರಧಾನ ಕಾರ್ಯದರ್ಶಿ ಗಿರೀಶ್‌ ಎಸ್‌. ದಿಬ್ಬೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.