ADVERTISEMENT

ಬಿಜೆಪಿ ಮುಖಂಡನ ಪತ್ನಿ ಅನುಮಾನಾಸ್ಪದ ಸಾವು,ಆತ್ಮಹತ್ಯೆ ಶಂಕೆ

ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 16:55 IST
Last Updated 27 ಅಕ್ಟೋಬರ್ 2020, 16:55 IST
ವಿನೋದಾ ಹಾಗೂ ಜಯಪ್ರಕಾಶ್
ವಿನೋದಾ ಹಾಗೂ ಜಯಪ್ರಕಾಶ್   

ಬೆಂಗಳೂರು: ಪಾಲಿಕೆಯ ಬಸವನಪುರ ವಾರ್ಡ್ ಮಾಜಿ ಸದಸ್ಯರೂ ಆಗಿರುವ ಬಿಜೆಪಿ ಮುಖಂಡ ಬಿ.ಎನ್‌.ಜಯಪ್ರಕಾಶ್ ಅವರ ಪತ್ನಿ ವಿನೋದಾ (30) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

‘ಮನೆಯ ಕೊಠಡಿಯಲ್ಲಿ ಮಂಗಳವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿನೋದಾ ದೇಹ ಇತ್ತು. ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಕೊಠಡಿಯಲ್ಲೇ ವಿನೋದಾ ಮೃತಪಟ್ಟಿರುವಾಗಿ ಹೇಳಿದರು. ಕುಟುಂಬಸ್ಥರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಕೆ.ಆರ್.ಪುರ ಪೊಲೀಸರು ಹೇಳಿದರು.

‘ಮನೆಯ ಕೊಠಡಿಯಲ್ಲಿ ಯಾವುದೇ ಮರಣಪತ್ರ ಸಿಕ್ಕಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಜಯಪ್ರಕಾಶ್ ಹಾಗೂ ವಿನೋದಾ, ಮೂರು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಅವರಿಗೆ ಎರಡು ವರ್ಷದ ಹೆಣ್ಣು ಮಗುವಿದೆ. ಸೀಗೆಹಳ್ಳಿಯ ಮಂಜುನಾಥ್ ಬಡಾವಣೆಯಲ್ಲಿ ದಂಪತಿ ವಾಸವಿದ್ದರು.’

‘ವಿನೋದಾ ಅವರು ಪುತ್ರಿಯನ್ನು ಮನೆಯಲ್ಲಿ ಆಟವಾಡಿಸುತ್ತಿದ್ದರು. ಪಡಸಾಲೆಯಲ್ಲಿ ಪುತ್ರಿಯನ್ನು ಬಿಟ್ಟು ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಅರ್ಧ ಗಂಟೆಯಾದರೂ ಕೊಠಡಿಯಿಂದ ಹೊರಗಡೆ ಬಂದಿರಲಿಲ್ಲ. ಅನುಮಾನಗೊಂಡ ಸಂಬಂಧಿಕರು, ಕೊಠಡಿಯೊಳಗೆ ಹೋಗಿ ನೋಡಿದಾಗ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡಿತ್ತು’ ಎಂದೂ ಪೊಲೀಸರು ಮಾಹಿತಿ ನೀಡಿದರು.

‘ಜಯಪ್ರಕಾಶ್ ಅವರು ಪತ್ನಿ ಕಳೆದುಕೊಂಡ ದುಃಖದಲ್ಲಿದ್ದಾರೆ. ಅಂತ್ಯಕ್ರಿಯೆ ಮುಗಿದ ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.