ADVERTISEMENT

‘ಅಪರಾಧಿಗಳ ಜೊತೆಗಿನ ಖಾಕಿ ಸ್ನೇಹ ಸಹಿಸಲ್ಲ’: ಬೊಮ್ಮಾಯಿ ಖಡಕ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 20:03 IST
Last Updated 29 ಆಗಸ್ಟ್ 2019, 20:03 IST
ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ಗುರುವಾರ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು
ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ಗುರುವಾರ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು   

ಬೆಂಗಳೂರು: ‘ಅಪರಾಧಿಗಳ ಜೊತೆ ಪೊಲೀಸ್‌ ಅಧಿಕಾರಿಗಳು ಯಾವುದೇ ರೀತಿಯ ಸ್ನೇಹ ಹೊಂದಿರುವುದನ್ನು ಸಹಿಸುವುದಿಲ್ಲ. ಅಂತಹ ಸಂಬಂಧ ಕಂಡುಬಂದರೆ ನಿರ್ದಾಕ್ಷ್ಯಿಣವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್‌ ಎಚ್ಚರಿಕೆ ನೀಡಿದರು.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ (ಎಸ್‌ಪಿ) ಜೊತೆ ಗುರುವಾರ ವಿಡಿಯೊ ಸಂವಾದ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಬಡ, ದುರ್ಬಲ ವರ್ಗದವರಿಗೆ ನ್ಯಾಯ ಕೊಡಿಸುವುದು ಪೊಲೀಸರ ಮೊದಲ ಕರ್ತವ್ಯ’ ಎಂದರು.

‘ರಾಜ್ಯದಲ್ಲಿ ಕೋಮು ಸೌಹಾರ್ದಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ಉಂಟಾಗದಂತೆ ಹಿರಿಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ಶಾಂತಿ ಕದಡುವ ಮತೀಯ ಶಕ್ತಿಗಳನ್ನು ಯಾವುದೇ ಮುಲಾಜಿಲ್ಲದೆ ಮಟ್ಟಹಾಕಬೇಕು’ ಎಂದು ಸೂಚಿಸಿದರು.

ADVERTISEMENT

ಸಮನ್ವಯ ಕೊರತೆಗೆ ಸಚಿವರ ಅತೃಪ್ತಿ
ಐಎಂಎ ವಂಚನೆ, ಫೋನ್ ಕದ್ದಾಲಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಗೃಹ ಸಚಿವರು, ಇಂಥ ಘಟನೆಗಳು ಮರುಕಳಿಸದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ವಿಡಿಯೊ ಸಂವಾದದಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆಯಿದೆ. ಈ ಹಿಂದೆ ಏನೆಲ್ಲ ನಡೆದಿದೆ ಅದು ಮುಂದುವರಿಸುವುದು ಬೇಡ. ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದೂ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

*
ಗಣೇಶ ಚತುರ್ಥಿ, ಮೊಹರಂ ಒಟ್ಟಿಗೆ ಬಂದಿದೆ. ಹಿರಿಯ ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಹಬ್ಬಗಳ ಆಚರಣೆ ಮೇಲೆ ನಿಗಾ ವಹಿಸಬೇಕು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.