ADVERTISEMENT

ಪ್ಲಾಸ್ಟಿಕ್ ನಿಷೇಧಕ್ಕೆ ಜಾಗೃತಿ: ಪಿಒಪಿ ಬದಲು ಮಣ್ಣಿನ ಗಣೇಶ ಮೂರ್ತಿ ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 20:06 IST
Last Updated 11 ಜುಲೈ 2019, 20:06 IST
   

ಬೆಂಗಳೂರು:ಪ್ಲಾಸ್ಟಿಕ್ ಬಳಕೆ ನಿಷೇಧ, ಕಸ ವಿಂಗಡಣೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿ ಬಳಕೆ ಬಗ್ಗೆ ಶಾಲಾ ಮಕ್ಕಳ ಮೂಲಕ ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ.

ಈ ಸಂಬಂಧ ಶಾಲಾ ಮುಖ್ಯಸ್ಥರ ಜತೆ ಮೇಯರ್ ಗಂಗಾಂಬಿಕೆ ಅವರು ಗುರುವಾರ ಸಭೆ ನಡೆಸಿದರು.

‘ಬಿಬಿಎಂಪಿ ವತಿಯಿಂದ ಎಲ್ಲಾ ವಲಯಗಳಲ್ಲೂ ಜಾಗೃತಿ ಜಾಥಾ ಆಯೋಜಿಸಲಾಗುತ್ತಿದೆ. ದಕ್ಷಿಣ ವಲಯದಲ್ಲಿ ಮೊದಲಿಗೆ ಜಾಥಾ ನಡೆಯಲಿದೆ.ಪಾಲಿಕೆಯ 20 ಹಾಗೂ 120 ಖಾಸಗಿ ಶಾಲೆಗಳ ಎಲ್ಲಾ ಮಕ್ಕಳನ್ನು ಜಾಥಾಕ್ಕೆ ಕರೆತರಬೇಕು’ ಎಂದು ಮೇಯರ್ ತಿಳಿಸಿದರು.

ADVERTISEMENT

‘ನಗರದಲ್ಲಿ ಪ್ರತಿನಿತ್ಯ 5,700 ಟನ್ ಕಸ ಉತ್ಪತ್ತಿಯಾಗುತ್ತಿದೆ. ಸಾರ್ವಜನಿಕರ ಅಸಹಕಾರದಿಂದ ಕಸ ವಿಂಗಡಣೆ ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾಗಿ, ಸಮಸ್ಯೆಬಿಗಡಾಯಿಸಿದೆ. ಸೆಪ್ಟೆಂಬರ್ 1ರಿಂದ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ವಿಂಗಡಿಸಿ ನೀಡದವರಿಗೆ ದಂಡ ವಿಧಿಸಲಾಗುವುದು’ ಎಂದು ಹೇಳಿದರು.

‘ಪಿಒಪಿಗಣೇಶ ಮೂರ್ತಿಗಳ ಬದಲು ಮಣ್ಣಿನ ಮೂರ್ತಿಗಳನ್ನು ಬಳಕೆ ಮಾಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯ. ಕೆರೆಯ ನೀರು ಮಲೀನ ಆಗುವುದನ್ನು ತಪ್ಪಿಸಲು ಎಲ್ಲರೂ ಮಣ್ಣಿನ ಮೂರ್ತಿಗಳನ್ನೇ ಬಳಸಬೇಕು’ ಎಂದು ಮನವಿ ಮಾಡಿದರು.

‘ಪರಿಸರ ಕಾಪಾಡಲು ಶಾಲಾ ಮಕ್ಕಳ ಸಹಕಾರ ಬೇಕಿದೆ. ಮಕ್ಕಳಿಗೆ ಅರಿವು ಮೂಡಿಸಿದರೆ ಅವರು ಪೋಷಕರಿಗೆ ಮನವರಿಕೆ ಮಾಡಿಸುತ್ತಾರೆ’ ಎಂದರು.

ಬಿಬಿಎಂಪಿಯಿಂದಪೇಪರ್ ಬ್ಯಾಗ್ ವಿತರಣೆ
‘ಪ್ಲಾಸ್ಟಿಕ್ ನಿಷೇಧವನ್ನು ಸಮರ್ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ‌ವ್ಯಾಪಾರಿಗಳಿಗೆ ಬಿಬಿಎಂಪಿಯಿಂದಲೇ ಪೇಪರ್ ಬ್ಯಾಗ್ ವಿತರಿಸಲು ಕ್ರಮ ವಹಿಸಲಾಗುತ್ತಿದೆ’ ಎಂದು ಗಂಗಾಂಬಿಕೆ ತಿಳಿಸಿದರು.

ಪ್ಲಾಸ್ಟಿಕ್ ನಿಷೇಧ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಅವರು,ತಂಗುದಾಣ, ರೈಲ್ವೆ ನಿಲ್ದಾಣ, ಉದ್ಯಾನಗಳಲ್ಲಿ ಫಲಕ ಅಳವಡಿಸಬೇಕು.ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಆಟೋಗಳಲ್ಲಿ ಧ್ವನಿವರ್ಧಕಗಳ ಮೂಲಕಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

‘ಎಲ್ಲಾ ವಾರ್ಡ್‌ಗಳಲ್ಲಿಆರೋಗ್ಯಾಧಿಕಾರಿಗಳು ಅಲ್ಲಿನ ಸದಸ್ಯರ ಸಹಯೋಗ ಪಡೆದು ಜು.15ರಿಂದಬೀದಿ ಬದಿಯ ಅಂಗಡಿಗಳು, ಬಿಬಿಎಂಪಿ ಹಾಗೂ ಬಿಡಿಎ ಕಾಂಪ್ಲೆಕ್ಸ್‌ಗಳು, ಪ್ರಮುಖ ಮಾರುಕಟ್ಟೆಗಳಿಗೆ ದಾಳಿ ನಡೆಸಿ ಪ್ಲಾಸ್ಟಿಕ್ ಕೈ ಚೀಲ ಜಪ್ತಿ ಮಾಡಬೇಕು. ಇನ್ನು ಮುಂದೆ ಪ್ಲಾಸ್ಟಿಕ್ ಕೈಚೀಲ ಬಳಕೆ ಮಾಡಿದರೆ ದುಪ್ಪಟ್ಟು ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.