ADVERTISEMENT

ಒಪ್ಪಂದ ಮುಗಿದ ಬಳಿಕ ಛಾಪಾ ಕಾಗದ ಖರೀದಿ!

ಚರಂಡಿ, ಪಾದಚಾರಿ ಕಾಮಗಾರಿ ವೇಳೆ ಎಡವಟ್ಟು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 9:12 IST
Last Updated 17 ಸೆಪ್ಟೆಂಬರ್ 2019, 9:12 IST
   

ಬೆಂಗಳೂರು: ಯಾವುದಾದರೂ ಒಪ್ಪಂದದ ಷರತ್ತುಗಳನ್ನು ನಿಗದಿತ ಮುಖಬೆಲೆಯ ಛಾಪಾ ಕಾಗದದಲ್ಲಿ ನಮೂದಿಸಿ ನೋಂದಣಿ ಮಾಡಿಸುವುದು ವಾಡಿಕೆ. ಛಾಪಾ ಕಾಗದದಲ್ಲಿ ನಮೂದಿಸಿರುವ ಒಪ್ಪಂದದ ಷರತ್ತುಗಳಿಗೆ ಸಹಿ ಹಾಕಿದ ಬಳಿಕ ಆ ಛಾಪಾ ಕಾಗದ ಖರೀದಿಸುವುದನ್ನು ಎಲ್ಲಾದರೂ ಕೇಳಿದ್ದೀರಾ?

ಅಧಿಕಾರಿಗಳು ಅಕ್ರಮಕ್ಕೆ ಮುಂದಾದಾಗ ಇವೆಲ್ಲವೂ ಸಾಧ್ಯವಾಗುತ್ತದೆ. ಮಳೆನೀರು ಚರಂಡಿ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿ ಸಂಬಂಧ ಮಾಡಿಕೊಂಡಿದ್ದ ಒಪ್ಪಂದದ ವೇಳೆ ಈ ಎಡವಟ್ಟು ನಡೆದಿದೆ.

ಬಿಬಿಎಂಪಿಯಲ್ಲಿ ಈ ಹಿಂದಿನ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಲಯಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಸಮಿತಿ ತನಿಖೆ ನಡೆಸಿದ ವೇಳೆ ಅಧಿಕಾರಿಗಳ ಈ ಎಡವಟ್ಟು ಬೆಳಕಿಗೆ ಬಂದಿದೆ.

ADVERTISEMENT

ಮಲ್ಲೇಶ್ವರ ವಿಭಾಗದ ಮೂರು ಕಡತಗಳಿಗೆ (ಸಂಖ್ಯೆ ಎಂ–689, ಎಂ–707 ಹಾಗೂ ಎಂ–713) ಸಂಬಂಧಿಸಿದಂತೆ 2009ರ ಆ. 24ರಂದು ಛಾಪಾಕಾಗದವನ್ನು ಖರೀದಿಸಲಾಗಿತ್ತು. ಆದರೆ, ಅದೇ ಕಾಗದದಲ್ಲಿ 2009ರ ಆ. 22ರಂದೇ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ವಿಭಾಗದಲ್ಲಿ ಇಂತಹ ಇನ್ನೂ 17 ಕಡತಗಳಲ್ಲೂ ಇಂತಹದ್ದೇ ಅಕ್ರಮಗಳನ್ನು ನಡೆಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆರ್‌.ಆರ್.ನಗರ ವಿಭಾಗದಲ್ಲೂ ಇಂತಹ ಎಡವಟ್ಟು ನಡೆದಿರುವುದು ಬಯಲಿಗೆ ಬಂದಿದೆ. ಅಲ್ಲಿನ ಕಡತ ಸಂಖ್ಯೆ ಆರ್‌ 247ರ ಪ್ರಕಾರ, ಏಜೆನ್ಸಿ ಹಾಗೂ ಉದ್ಯೋಗದಾತ ಸಂಸ್ಥೆ ನಡುವೆ ಒಪ್ಪಂದ ಮಾಡಿಕೊಳ್ಳಲು ಛಾಪಾ ಕಾಗದ ಖರೀದಿ ಮಾಡಿದ್ದು 2007ರ ಅಕ್ಟೋಬರ್‌ 9ರಂದು. ಆದರೆ, ಆ ಒಪ್ಪಂದಕ್ಕೆ ಸಹಿ ಹಾಕಿದ್ದು 2007ರ ಮೇ 5ರಂದು. ಇದು ಹೇಗೆ ಸಾಧ್ಯ ಎಂಬುದೇ ಚೋದ್ಯ.

ಸಹಿಯೇ ಇಲ್ಲ!

ಛಾಪಾ ಕಾಗದ ಖರೀದಿ ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕದಲ್ಲಷ್ಟೇ ಅಕ್ರಮ ನಡೆದಿರುವುದಲ್ಲ. ಸಂಬಂಧಪಟ್ಟವರ ಸಹಿಯೇ ಇಲ್ಲದೆ ಒಪ್ಪಂದ ಜಾರಿಗೆ ತಂದಿರುವುದನ್ನೂ ಸಮಿತಿ ಪತ್ತೆ ಹಚ್ಚಿದೆ.

ಆರ್‌.ಆರ್‌.ನಗರ ವಿಭಾಗದಲ್ಲಿ ಕಡತ ಸಂಖ್ಯೆ ಆರ್‌–584, ಆರ್‌–582, ಆರ್‌–589ಕ್ಕೆ ಹಾಗೂ ಮಲ್ಲೇಶ್ವರ ವಿಭಾಗದ ಕಡತ ಸಂಖ್ಯೆ ಎಂ–3169, ಎಂ–820, ಎಂ–811, ಎಂ–802 ಹಾಗೂ ಗಾಂಧಿನಗರ ವಿಭಾಗದ ಕಡತ ಸಂಖ್ಯೆ ಜಿ– 740, ಜಿ–318, ಜಿ–333, ಜಿ–377, ಜಿ–832 ಹಾಗೂ ಜಿ– 1132ಗಳಲ್ಲಿ ಒಪ್ಪಂದ ಪತ್ರಕ್ಕೆ ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್‌ ಅಥವಾ ಏಜೆನ್ಸಿಯ ಸಹಿಯೇ ಇಲ್ಲ ಎಂದು ತನಿಖಾ ವರದಿ ಹೇಳಿದೆ.

ಒಪ್ಪಂದ ಅನೂರ್ಜಿತ

ಕೆಲವು ಛಾಪಾ ಕಾಗದಗಳಲ್ಲಿ ಅದನ್ನು ಮಾರಾಟ ಮಾಡಿದ ದಿನಾಂಕವನ್ನೇ ನಮೂದಿಸಿಲ್ಲ. ಹಾಗಾಗಿ ಅಂತಹ ಒಪ್ಪಂದಗಳು ಅನೂರ್ಜಿತವಾಗುತ್ತವೆ. ಮಲ್ಲೇಶ್ವರ ವಿಭಾಗದಲ್ಲಿ ಕಡತ ಸಂಖ್ಯೆ ಎಂ–638, ಎಂ–814, ಎಂ– 842, ಎಂ–802, ಎಂ–1375, ಎಂ–1373 ಹಾಗೂ ಗಾಂಧಿನಗರ ವಿಭಾಗದ ಜಿ– 321, ಜಿ– 1157, ಜಿ–1736 ಕಡತಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಈ ಕಾರಣಕ್ಕಾಗಿ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ನಡೆದದ್ದು ಯಾವತ್ತು?

ಒಟ್ಟು ಐದು ಕಡತಗಳಿಗೆ ಸಂಬಂಧಿಸಿದ ಒಪ್ಪಂದಗಳಲ್ಲಿ ಒಪ್ಪಂದದ ಸಂಖ್ಯೆಯಾಗಲೀ, ಅದನ್ನು ಮಾಡಿಕೊಂಡ ದಿನಾಂಕವನ್ನಾಗಲೀ ನಮೂದಿಸಿಲ್ಲ. ಮಲ್ಲೇಶ್ವರ ವಿಭಾಗದ ಕಡತ ಸಂಖ್ಯೆ ಎಂ–631, ಗಾಂಧಿನಗರ ವಿಭಾಗದ ಕಡತ ಸಂಖ್ಯೆ ಜಿ–456, ಜಿ–437, ಜಿ–327 ಹಾಗೂ ಜಿ– 755ಕ್ಕೆ ಸಂಬಂಧಿಸಿದ ಒಪ್ಪಂದಗಳಲ್ಲಿ ಇಂತಹ ಲೋಪಗಳನ್ನು ಸಮಿತಿ ಪತ್ತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.