ADVERTISEMENT

₹2,122 ಕೋಟಿ ತೆರಿಗೆ ಸಂಗ್ರಹ: ಮೇಯರ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:43 IST
Last Updated 27 ಸೆಪ್ಟೆಂಬರ್ 2019, 19:43 IST
   

ಬೆಂಗಳೂರು: ‘ಬಿಬಿಎಂಪಿ ಇತಿಹಾಸದಲ್ಲೇ ಅತೀ ಹೆಚ್ಚು ತೆರಿಗೆ ವಸೂಲಿ ಈ ವರ್ಷ ಆಗಿದ್ದು, ಸೆಪ್ಟೆಂಬರ್ 15ರ ವೇಳೆಗೆ ₹2,122 ಕೋಟಿ ಸಂಗ್ರಹವಾಗಿದೆ’ ಎಂದು ಮೇಯರ್ ಗಂಗಾಂಬಿಕೆ ಹೇಳಿದರು.

‘ಸ್ವಚ್ಛತೆ, ಪರಿಸರ ಸಂರಕ್ಷಣೆ, ತೆರಿಗೆ ವಸೂಲಿ, ಚಾಲ್ತಿ ಕಾಮಗಾರಿಗಳನ್ನು ಚುರುಕಾಗಿ ಮುಗಿಸುವುದು ಮತ್ತು ಜನಸ್ನೇಹಿ ಆಡಳಿತ ಸೇರಿದಂತೆ ಐದು ಅಂಶಗಳಿಗೆ ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ’ ಎಂದು ಶುಕ್ರವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘‌ಐದು ಅಂಶ‌ಗಳಲ್ಲಿ ತೆರಿಗೆ ಸಂಗ್ರಹವೂ ಒಂದು. ವಲಯವಾರು ಸಭೆಗಳನ್ನು ನಡೆಸಿ ಪ್ರತಿ ಬುಧವಾರ ತೆರಿಗೆ ವಸೂಲಾತಿ ಆಂದೋಲನ ಆರಂಭಿಸಿದೆ. ವಲಯವಾರು 100 ಸುಸ್ತಿದಾರರನ್ನು ಗುರುತಿಸಿ ನೋಟಿಸ್ ನೀಡಲಾಯಿತು. ಜಪ್ತಿಗೆ ಕ್ರಮ ಕೈಗೊಳ್ಳಲಾಯಿತು. ಆನ್‌ಲೈನ್ ಮೂಲಕವೂ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಯಿತು. ಎಲ್ಲರದ ಪರಿಣಾಮ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ’ ಎಂದರು.

ADVERTISEMENT

ಈ ಹಿಂದೆ ಬಿಬಿಎಂಪಿ ಅಡಮಾನ ಇಟ್ಟಿದ್ದ 11 ಅಸ್ತಿಗಳ ಪೈಕಿ 10 ಆಸ್ತಿಗಳನ್ನು ಬಿಡಿಸಿಕೊಳ್ಳಲಾಗಿದೆ. ₹463.65 ಕೋಟಿ ಪಾವತಿಸಿ ಮಾರ್ಕೆಟ್ ಕಟ್ಟಡವನ್ನು ಪಾಲಿಕೆ ವಶಕ್ಕೆ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.

‘ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಎಲ್ಲೆಂದರಲ್ಲಿ ಕಸ ಬೀಳುವುದನ್ನು ತಪ್ಪಿಸಲಾಗಿದೆ. ಒಂಬತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಯನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಆಗಬೇಕು ಎಂಬ ಕಾರಣಕ್ಕೆ ಬೈಲಾ ರೂಪಿಸಲಾಗಿದೆ’ ಎಂದರು.

‘ಪರಿಸರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಳೆಗಾಲ ಆರಂಭಕ್ಕೆ ಮುನ್ನವೇ ಯೋಜನೆ ರೂಪಿಸಿ ಸಸಿಗಳನ್ನು ನೆಡಲಾಯಿತು. ಪ್ಲಾಸ್ಟಿಕ್ ನಿಷೇಧಕ್ಕೆ ಸಾಕಷ್ಟು ಶ್ರಮ ವಹಿಸಿದ್ದೇನೆ’ ಎಂದರು.‌

‘ಅನುದಾನ‌ ಕಡಿತಕ್ಕೆ ಅಸಮಾಧಾನ ಇಲ್ಲ’

‘ಸರ್ಕಾರ ಬದಲಾದಾಗ ಅನುದಾನ ಹಂಚಿಕೆಯಲ್ಲೂ ಬದಲಾವಣೆ ಆಗುತ್ತದೆ. ಅದಕ್ಕೆಲ್ಲಾ ಅಸಮಾಧಾನ ಮಾಡಿಕೊಂಡರೆ ಕೆಲಸ ಮಾಡಲು ಆಗುವುದೇ ಇಲ್ಲ’ ಎಂದು ಗಂಗಾಂಬಿಕೆ ಹೇಳಿದರು.

ಕಾಂಗ್ರೆಸ್ ಶಾಸಕರು ಮತ್ತು ಪಾಲಿಕೆ ಸದಸ್ಯರ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕ್ರಿಯಾ ಯೋಜನೆ ಬದಲಾವಣೆ ಮತ್ತು ಬಜೆಟ್ ಅನುದಾನ ಕಡಿತ ಮಾಡಿದ್ದನ್ನು ಹೊರತುಪಡಿಸಿ ಉಳಿದ ವಿಷಯದಲ್ಲಿ ಸರ್ಕಾರದ ನಡೆ ನನಗೆ ಖುಷಿ ಕೊಟ್ಟಿದೆ’ ಎಂದರು.

‘ನವನಗರೋತ್ಥಾನ ಯೋಜನೆ ಅನುದಾನದಲ್ಲಿ ಕಡಿತ ಮಾಡಿರುವುದನ್ನು ಖಂಡಿಸಿ ಶಾಸಕ ರಾಮಲಿಂಗಾರೆಡ್ಡಿ ಅವರು ಪ್ರತಿಭಟನೆ ನಡೆಸಿದ್ದಾರೆ. ಮೇಯರ್ ಸ್ಥಾನದಲ್ಲಿ ಕುಳಿತು ನನಗೆ ಬೇಸರ ಆಗಿದೆ ಅಥವಾ ಇಲ್ಲ ಎಂದು ಹೇಳಲು ಆಗುವುದಿಲ್ಲ. ಅಸಮಾಧಾನ ಮಾಡಿಕೊಂಡರೆ ಅನುದಾನ ವಾಪಸ್ ಕೊಡುತ್ತಾರೆಯೇ’ ಎಂದು ಪ‍್ರಶ್ನಿಸಿದರು.

‘ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ಮೇಯರ್ ಆಗಿ ಆದೇಶ ಒಪ್ಪಿಕೊಳ್ಳಬೇಕಾಗುತ್ತದೆ. ಉಲ್ಲಂಘನೆ ಮಾಡಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತೆರಿಗೆ ಸಂಗ್ರಹದ ವಿವರ (₹ಕೋಟಿಗಳಲ್ಲಿ)

2016–17; 2,181

2017–18; 2,192

2018–19; 2,565

2019–20; 2,122(ಸೆಪ್ಟೆಂಬರ್ 15ರವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.