ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿ ನಗರದ ಯಾವ ಭಾಗದಲ್ಲೂ ಒಂದು ಗಿಡವನ್ನೂ ನೆಟ್ಟಿಲ್ಲ.
ಪ್ರಸಕ್ತ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲೇ ಸಸಿ ನೆಡಬೇಕಿತ್ತು. ವಿಧಾನಸಭೆ ಚುನಾವಣೆಯಿಂದಾಗಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಯಿತು. ನಂತರ ಮೇಯರ್ ಚುನಾವಣೆ ನಡೆಯಿತು. ಆಗಲೂ ಈ ಕ್ರಮ ವಹಿಸಲು ಪಾಲಿಕೆಯಿಂದ ಸಾಧ್ಯವಾಗಿಲ್ಲ.
‘ಸಸಿ ನೆಡಲು ಪಾಲಿಕೆಯಿಂದ ಕಾರ್ಯಾದೇಶ ಸಿಕ್ಕಿರಲಿಲ್ಲ. ಚುನಾವಣೆ ನಂತರ ಅನುಮೋದನೆ ದೊರೆತಿದೆ. ಸದ್ಯ ಮಳೆಗಾಲ ಮುಗಿದಿರುವುದರಿಂದ, ಮುಂದಿನ ವರ್ಷವೇ ಸಸಿ ನೆಡಲಾಗುವುದು. ಈ ಬಗ್ಗೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚಿಸಿ, ತೀರ್ಮಾನಿಸಲಾಗಿದೆ’ ಎಂದು ಪಾಲಿಕೆಯ ಅರಣ್ಯ ವಿಭಾಗದ ಡಿಸಿಎಫ್ ಚೋಳರಾಜ್ ತಿಳಿಸಿದರು.
ನಗರಾದ್ಯಂತ ಸುಮಾರು 10 ಲಕ್ಷ ಸಸಿಗಳನ್ನು ನೆಡುವ ಗುರಿಯಿತ್ತು. ಈ ವರ್ಷ 75 ಸಾವಿರ ಸಸಿಗಳನ್ನು ನೆಡಲು ಯೋಜಿಸಿತ್ತು. ಆದರೆ, ಸಸಿ ನೆಡಲು ಸಾಧ್ಯವಾಗಿಲ್ಲ. ‘ಬಿಬಿಎಂಪಿಯ ನರ್ಸರಿಗಳಲ್ಲಿ 75,000 ಸಸಿಗಳಿವೆ. ಇವುಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇರುವುದರಿಂದಟೆಂಡರ್ ಕರೆಯಬೇಕಿತ್ತು. ಈ ತನಕ ಟೆಂಡರ್ ಕರೆಯಲಾಗಿಲ್ಲ’ ಎಂದು ಪಾಲಿಕೆಯಮೂಲಗಳು ಹೇಳಿವೆ.
ಮಳೆಗಾಳಿಗೆ ಬೇಗ ಬೀಳುವ ಪೆಲ್ಟೊಪೊರಂ, ಗುಲ್‌ಮೋಹರ್ ಬದಲು, ಆಳ ಬೇರು ಬಿಡುವ ಹೊಂಗೆ, ಆಕಾಶ ಮಲ್ಲಿಗೆಯಂತಹ ಸಸಿಗಳನ್ನೇ ನೆಡಲು ಪಾಲಿಕೆ ಮುಂದಾಗಿದೆ.
‘ಮಹದೇವಪುರ, ದಾಸರಹಳ್ಳಿ ಹಾಗೂ ಪೂರ್ವ ವಲಯಗಳ ರಸ್ತೆ ಬದಿಗಳಲ್ಲಿ ಗಿಡ ನೆಡಲು ಸಾಕಷ್ಟು ಸ್ಥಳಾವಕಾಶ ಇದೆ. ಇತರೆಡೆ ಸ್ಥಳಾವಕಾಶದ ಲಭ್ಯತೆ ಪರಿಶೀಲಿಸಿ, ಸಸಿ ನೆಡಲಾಗು ವುದು. ಒಂದು ಸಸಿ ನೆಡಲು ಸುಮಾರು ₹672 ವೆಚ್ಚ ತಗಲುತ್ತದೆ’ ಎಂದು ಚೋಳರಾಜ್ ಮಾಹಿತಿ ನೀಡಿದರು.
* ನಗರದ ವಿವಿಧೆಡೆ ಒಣಗಿ ನಿಂತ ಗಿಡಗಳನ್ನು ಶೀಘ್ರ ತೆರವುಗೊಳಿಸಲು ಪಾಲಿಕೆಯ ಸಿಬ್ಬಂದಿಗೆ ತಿಳಿಸಿದ್ದೇವೆ. ಆದೇಶಕ್ಕಾಗಿ ಕಾಯಬೇಡಿ ಎಂದೂ ಹೇಳಿದ್ದೇವೆ
-ಚೋಳರಾಜ್, ಡಿಸಿಎಫ್, ಅರಣ್ಯ ವಿಭಾಗ, ಬಿಬಿಎಂಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.