ADVERTISEMENT

ಬಿಬಿಎಂಪಿ ಕಾಯ್ದೆ: ಬಿಜೆಪಿಯೊಳಗೇ ಅಸಮಾಧಾನ

ಕಾಯ್ದೆ ವಿರುದ್ಧ ಆಕ್ರೋಶ lಲೋಪ ಸರಿಪಡಿಸುವಂತೆ ಒತ್ತಾಯಿಸಿ ಸಿ.ಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 20:20 IST
Last Updated 23 ಜನವರಿ 2021, 20:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಬಿಬಿಎಂಪಿ ಕಾಯ್ದೆಯ ಕೆಲವು ಅಂಶಗಳು ಲೋಪಗಳಿಂದ ಕೂಡಿವೆ ಎಂದು ಸ್ವತಃ ಬಿಜೆಪಿ ಮುಖಂಡರೇ ಧ್ವನಿ ಎತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದಾಗಲೇ ಅದರಲ್ಲಿರುವ ಕೆಲವು ಅಂಶಗಳು ಸಂವಿಧಾನದ 174ನೇ ತಿದ್ದುಪಡಿಯ ಅಶಯಗಳಿಗೆ ವಿರುದ್ಧವಾಗಿವೆ ಎಂದು ಕೆಲವು ಬಿಜೆಪಿ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದರು. ಆದರೆ, ಯಾರೂ ಬಹಿರಂಗವಾಗಿ ಇದನ್ನು ಟೀಕಿಸಿರಲಿಲ್ಲ. ಕೊನೆಗೂ ಬಿಜೆಪಿ ನಾಯಕರು ಇದರ ವಿರುದ್ಧ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಕಾಯ್ದೆಯ ಲೋಪಗಳನ್ನು ಪಟ್ಟಿ ಮಾಡಿ ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿಯವರು ನಗರಾಭಿವೃದ್ಧಿ ಇಲಾಖೆಗೆ ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಜನರಿಂದ ಆಯ್ಕೆಯಾದ ಪಾಲಿಕೆ ಸದಸ್ಯರ ಎಲ್ಲ ಅಧಿಕಾರಗಳನ್ನು ಹಾಗೂ ಹಕ್ಕುಗಳನ್ನು ಮೊಟಕುಗೊಳಿಸುವ ದುರುದ್ದೇಶದಿಂದಲೇ ಹೊಸ ಕಾಯ್ದೆಯಲ್ಲಿ 16 ಸೆಕ್ಷನ್‌ಗಳನ್ನು ಸೇರಿಸಿಕೊಳ್ಳಲಾಗಿದೆ. ಒಟ್ಟು 376 ಸೆಕ್ಷನ್‌ಗಳನ್ನು ಹೊಂದಿರುವ ಈ ಕಾಯ್ದೆಯಲ್ಲಿ ಈ 16 ಸೆಕ್ಷನ್‌ಗಳನ್ನು ಹೊರತುಪಡಿಸಿ ಉಳಿದ 360 ಸೆಕ್ಷನ್‌ಗಳನ್ನೂ 45 ವರ್ಷಗಳ ಹಿಂದೆ ರೂಪಿಸಲಾದ 1976ರ ಕರ್ನಾಟಕ ಪೌರನಿಗಮಗಳ ಕಾಯ್ದೆಯಿಂದ ಯಥಾವತ್‌ ನಕಲು ಮಾಡಲಾಗಿದೆ. 2020ರ ಡಿಸೆಂಬರ್‌ ತಿಂಗಳಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಕೊನೆಯ 2–3 ದಿನಗಳಲ್ಲಿ ಈ ಕಾಯ್ದೆಯನ್ನು ಸಿದ್ಧಪಡಿಸಿರುವುದು ಅತ್ಯಂತ ಸ್ಪಷ್ಟ’ ಎಂಬುದು ಬಿಜೆಪಿ ಮುಖಂಡರ ನೇರ ಆರೋಪ.

‘ಈ ಕಾಯ್ದೆ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು ಬುಡಮೇಲು ಮಾಡಲಿದೆ. ಪಾಲಿಕೆಯ ಆರ್ಥಿಕ ವ್ಯವಸ್ಥೆಯನ್ನು ಶಾಸಕರ ಕಪಿಮುಷ್ಠಿಗೆ ಕೊಟ್ಟು ಪಾಲಿಕೆ ಸದಸ್ಯರನ್ನು ಗೊಂಬೆಯಾಟದ ಸೂತ್ರದ ಬೊಂಬೆಗಳಂತೆ ಮಾಡಿ ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವ ಕುತಂತ್ರವಿದು’ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಭಾರತದ ಸಂವಿಧಾನದ ಪ್ರಕಾರ ಗ್ರಾಮಪಂಚಾಯಿತಿಯಿಂದ ಹಿಡಿದು ಯಾವುದೇ ಸ್ಥಳೀಯ ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಶಾಸಕರಾಗಲೀ ಸಂಸದರಾಗಲೀ ಮೂಗು ತೂರಿಸುವಂತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಜನ ಪ್ರತಿನಿಧಿಗಳ ಸಂವಿಧಾನಬದ್ಧ ಅಧಿಕಾರವನ್ನು ಮೊಟಕುಗೊಳಿಸುವ ಹಕ್ಕು ಶಾಸಕಾಂಗಕ್ಕೆ ಇಲ್ಲ. ಸ್ಥಳೀಯ ಸಂಸ್ಥೆಗಳ ಬಜೆಟ್ ಅನ್ನು ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನಗಳನ್ನು ಮೀಸಲಿಡುವಂತಿಲ್ಲ’ ಎಂದೂ ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.