ADVERTISEMENT

ಮೂರು ವರ್ಷಗಳ ಆಡಳಿತ ವರದಿ ಮಂಡನೆ

ಮಂಡನೆಗೆ ವಿರೋಧ ಪಕ್ಷ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 19:45 IST
Last Updated 18 ಸೆಪ್ಟೆಂಬರ್ 2019, 19:45 IST
ಮೇಯರ್‌ ಗಂಗಾಂಬಿಕೆ ಅವರು ತಮ್ಮ ಆಡಳಿತಾವಧಿಯ ಕೊನೆಯ ಕೌನ್ಸಿಲ್‌ ಸಭೆಯನ್ನು ಮುಕ್ತಾಯಗೊಳಿಸಿ ಹೊರಡಲು ಅನುವಾದ ಕ್ಷಣ. ಉಪ ಮೇಯರ್‌ ಬಿ.ಭದ್ರೇಗೌಡ (ಎಡತುದಿ) ಅವರೂ ಇದ್ದಾರೆ– ಪ್ರಜಾವಾಣಿ ಚಿತ್ರ
ಮೇಯರ್‌ ಗಂಗಾಂಬಿಕೆ ಅವರು ತಮ್ಮ ಆಡಳಿತಾವಧಿಯ ಕೊನೆಯ ಕೌನ್ಸಿಲ್‌ ಸಭೆಯನ್ನು ಮುಕ್ತಾಯಗೊಳಿಸಿ ಹೊರಡಲು ಅನುವಾದ ಕ್ಷಣ. ಉಪ ಮೇಯರ್‌ ಬಿ.ಭದ್ರೇಗೌಡ (ಎಡತುದಿ) ಅವರೂ ಇದ್ದಾರೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಲವು ನಾಟಕೀಯ ಬೆಳವಣಿಗೆಗಳ ನಡುವೆ ಉಪಮೇಯರ್‌ ಬಿ.ಭದ್ರೇಗೌಡ ಅವರು ಕೌನ್ಸಿಲ್‌ ಸಭೆಯಲ್ಲಿಬುಧವಾರ 2012–13, 2013–14 ಹಾಗೂ 2014–15ನೇ ಸಾಲುಗಳ ಆಡಳಿತ ವರದಿ ಮಂಡಿಸಿದರು.

ಕೆಎಂಸಿ ಕಾಯ್ದೆ ಪ್ರಕಾರ ಆಯಾ ಆರ್ಥಿಕ ವರ್ಷದಲ್ಲೇ ಆಡಳಿತ ವರದಿ ಮಂಡಿಸುವುದು ಕಡ್ಡಾಯ.2016ರಲ್ಲಿ ಆಗಿನ ಉಪಮೇಯರ್ ಎಸ್.ಪಿ.ಹೇಮಲತಾ ಅವರು 2006-07 ರಿಂದ 2011-12ರವರೆಗಿನ ಆಡಳಿತ ವರದಿಗಳನ್ನು ಮಂಡನೆ ಮಾಡಿದ್ದರು. ನಂತರದ ವರ್ಷಗಳ ಆಡಳಿತ ವರದಿಗಳನ್ನು ಯಾವ ಉಪಮೇಯರ್‌ಗಳೂ ಮಂಡಿಸಿರಲಿಲ್ಲ.

ಈ ಬಾರಿ ಆಡಳಿತ ವರದಿ ಮಂಡನೆಗೆ ದಿನಾಂಕ ನಿಗದಿಪಡಿಸಿದ ಬಳಿಕ, 2019–20ನೇ ಸಾಲಿನ ಮೇಯರ್‌ ಮತ್ತು ಉಪಮೇಯರ್‌ ಆಯ್ಕೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಾದೇಶಿಕ ಆಯುಕ್ತರು ಪ್ರಕಟಿಸಿದ್ದರು. ಮೇಯರ್‌ ಚುನಾವಣೆ ವಿಚಾರವನ್ನೇ ಮುಂದಿಟ್ಟುಕೊಂಡು ವಿರೋಧಪಕ್ಷದ ಸದಸ್ಯರು ವರದಿ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ADVERTISEMENT

ಸಭೆ ಆರಂಭವಾಗುತ್ತಿದ್ದಂತೆಯೇ ಕ್ರಿಯಾಲೋಪ ಎತ್ತಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಕೆಎಂಸಿ ಕಾಯ್ದೆಯ ಸೆಕ್ಷನ್‌ 10ರ ಪ್ರಕಾರ ಈ ವರದಿ ಮಂಡಿಸಲು ಅವಕಾಶ ಇದೆಯೇ ಎಂಬುದನ್ನು ಕಾನೂನು ಕೋಶದ ಮುಖ್ಯಸ್ಥರು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

ಈ ಕುರಿತು ‍ಪ್ರತಿಕ್ರಿಯಿಸಿದ ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ, ‘ವರದಿ ಮಂಡಿಸಬಹುದು ಎಂದುನಾನು ಅಭಿಪ್ರಾಯ ನೀಡಿದಾಗ ಮೇಯರ್‌ ಚುನಾವಣೆಗೆ ದಿನಾಂಕ ನಿಗದಿ ಆಗಿರಲಿಲ್ಲ. ಸಭೆಗೆ ದಿನಾಂಕ ನಿಗದಿಪಡಿಸುವುದು ನನ್ನ ಕೆಲಸ ಅಲ್ಲ’ ಎಂದರು.

‘ಮೇಯರ್‌ ಚುನಾವಣೆಗೆ ದಿನಾಂಕ ನಿಗದಿ ಆದ ಬಳಿಕ ಕೌನ್ಸಿಲ್‌ ಸಭೆ ನಡೆಸಬಾರದು ಎಂದೇನಿಲ್ಲ. ತಮ್ಮ ಆಡಳಿತಾವಧಿಯ ಹುಳುಕು ಹೊರಬಹುತ್ತದೆ ಎಂಬ ಕಾರಣಕ್ಕೆ ಬಿಜೆಪಿಯವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಆಡಳಿತ ಪಕ್ಷದ ಎಂ.ಶಿವರಾಜು ಆರೋಪಿಸಿದರು.

ಆದರೆ, ಆಡಳಿತ ಪಕ್ಷದ ಎಂ.ಕೆ.ಗುಣಶೇಖರ್, ‘ಮೇಯರ್‌ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಯಾದ ಬಳಿಕ ವರದಿ ಮಂಡನೆ ಸೂಕ್ತವಲ್ಲ’ ಎಂದರು.

ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದರಿಂದ ಮೇಯರ್ ಗಂಗಾಂಬಿಕೆ ಸಭೆಯನ್ನು 15 ನಿಮಿಷ ಮುಂದೂಡಿದರು.

ಬಳಿಕ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ‘ವರದಿ ಮಂಡಿಸಲು ಮೇಯರ್‌ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗದು. ಈ ಅವಧಿಯಲ್ಲಿ ಕೌನ್ಸಿಲ್‌ ಸಭೆ ನಡೆಸಲು ನಿರ್ಬಂಧ ಇಲ್ಲ. ಅಷ್ಟಕ್ಕೂ ನಾವು ಯಾವುದೇ ನಿರ್ಣಯ ಕೈಗೆತ್ತಿಕೊಳ್ಳುತ್ತಿಲ್ಲ. ಇದೇ 27ರಂದು ಹೊಸ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆ ನಡೆಯಲಿದ್ದು, ನಂತರದ ಕೌನ್ಸಿಲ್‌ ಸಭೆಯಲ್ಲಿ ವರದಿ ಬಗ್ಗೆ ಚರ್ಚೆ ನಡೆಯಲಿ’ ಎಂದರು.

‘ಆಡಳಿತ ವರದಿ ಹಾಗೂ ಲೆಕ್ಕಪರಿಶೋಧನಾ ವರದಿಗಳನ್ನು ಆಯಾ ವರ್ಷವೇ ಮಂಡಿಸುವುದು ಶಾಸನಬದ್ಧ ಕರ್ತವ್ಯ. ಕಾರಣಾಂತರಗಳಿಂದ ಇದು ಸಾಧ್ಯವಾಗಿರಲಿಲ್ಲ. ಈಗ ವರದಿ ಮಂಡಿಸಲು ಅಭ್ಯಂತರ ಇಲ್ಲ’ ಎಂದು ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಹೇಳಿದರು.

ಬಳಿಕ ಉಪಮೇಯರ್ ವರದಿಗಳನ್ನು ಮಂಡಿಸಿದರು.

‘ಸಂಬಳಕ್ಕೆ ಕತ್ತರಿ– ಎಚ್ಚರಿಕೆ ಬಳಿಕ ಸಿದ್ಧವಾಯಿತು ವರದಿ’

‘ನಾನು ಆಡಳಿತ ವರದಿಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ವರದಿ ಸಿದ್ಧಪಡಿಸುವುದಕ್ಕೆ ಪೂರಕ ದಾಖಲೆ ಒದಗಿಸದ ಅಧಿಕಾರಿಗಳ ಸಂಬಳ ತಡೆಹಿಡಿಯುವುದಾಗಿ ಎಚ್ಚರಿಕೆ ನೀಡಿದ ಬಳಿಕ ಎಲ್ಲರೂ ಮಾಹಿತಿ ಕಳುಹಿಸಿಕೊಟ್ಟರು’ ಎಂದು ಭದ್ರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.