ಬೆಂಗಳೂರು: ಸಂಚಾರ ದಟ್ಟಣೆ ಹೆಚ್ಚಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಸುಗಮ ಸಂಚಾರಕ್ಕೆ ಇರುವ ಮಾರ್ಗೋಪಾಯಗಳ ಬಗ್ಗೆ ಪರಿಶೀಲನೆ ನಡೆಸಲು ಬಿಬಿಎಂಪಿ, ಬಿಡಿಎ, ಜಲ ಮಂಡಳಿ, ಪೊಲೀಸ್, ಬೆಸ್ಕಾಂ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ ನಗರ ಸಂಚಾರ ನಡೆಸಿತು.
ಗೊರಗುಂಟೆಪಾಳ್ಯ, ಹೆಬ್ಬಾಳ, ಕೆ.ಆರ್.ಪುರ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ಗಳಿಗೆ ತಂಡ ಭೇಟಿ ನೀಡಿತ್ತು. ಮೊದಲಿಗೆ ಗೊರಗುಂಟೆ ಪಾಳ್ಯದಲ್ಲಿ ರಸ್ತೆ ಹಾಳಾಗಿರುವುದು, ಸಾರ್ವಜನಿಕ ಶೌಚಾಲಯ ಇಲ್ಲದಿರುವುದು, ಪಾದಚಾರಿಗಳು ರಸ್ತೆ ದಾಟಲು ಇರುವ ತೊಂದರೆಗಳನ್ನು ಸರಿಪಡಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿತು.
‘ರಸ್ತೆ ದುರಸ್ತಿ, ಶೌಚಾಲಯ, ಪಾದಚಾರಿ ಮೇಲ್ಸೇತುವೆಗಳನ್ನು ತುರ್ತಾಗಿ ನಿರ್ಮಿಸಬೇಕಿದೆ. ಅದಕ್ಕೆ ಬೇಕಿರುವ ಕಾರ್ಯಯೋಜನೆಯನ್ನು ಬುಧವಾರದಿಂದಲೇ ಆರಂಭಿಸಲಾಗುವುದು. ಸಂಚಾರ ದಟ್ಟಣೆ ಸಮಸ್ಯೆ ಸರಿಪಡಿಸಲು ದೀರ್ಘಕಾಲದ ಯೋಜನೆಯನ್ನು ಬಿಡಿಎ ಸಿದ್ಧಪಡಿಸಿದೆ. ಅನುಷ್ಠಾನದ ಸಾಧಕ–ಬಾಧಕಗಳ ಬಗ್ಗೆಯೂ ಪರಿಶೀಲಿಸಲಾಗುವುದು’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹೇಳಿದರು.
‘ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಸಂಚಾರವನ್ನು ನಗರದೊಳಗೆ ನಿರ್ಬಂಧಿಸಿ ಪೀಣ್ಯ ಬಸ್ ನಿಲ್ದಾಣ ಬಳಿಯೇ ಬಸ್ ನಿಲುಗಡೆ ಮಾಡಿಸುವ ಸಂಬಂಧ ಕೆಎಸ್‌ಆರ್‌ಟಿಸಿಗೂ ಮನವಿ ಮಾಡಲಾಗಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ’ ಎಂದು ತಿಳಿಸಿದರು.
‘ರಸ್ತೆ ದುರಸ್ತಿ ಕಾರ್ಯವನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಪೀಣ್ಯ(ಶಿವಕುಮಾರಸ್ವಾಮಿ) ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೂ ಅವಕಾಶ ದೊರೆತರೆ ಸಂಚಾರ ದಟ್ಟಣೆ ಸಮಸ್ಯೆ ಸುಧಾರಿಸಲಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ನಗರ ಪೊಲೀಸ್ ಕಮಿಷನರ್ ಪ್ರತಾಪರೆಡ್ಡಿ, ಬಿಡಿಎ ಆಯುಕ್ತ ರಾಜೇಶ್‌ಗೌಡ, ಜಲ ಮಂಡಳಿ ಅಧ್ಯಕ್ಷ ಜಯರಾಮ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.