ADVERTISEMENT

ಕೊನೆಗೂ ಒಲಿದ ಕನಸಿನ ಮನೆ

60 ಕಾಯಂ ಪೌರಕಾರ್ಮಿಕರಿಗೆ ಬಿಬಿಎಂಪಿ ವತಿಯಿಂದ ಬಿಡಿಎ ಫ್ಲ್ಯಾಟ್ ಹಕ್ಕುಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 21:16 IST
Last Updated 18 ಫೆಬ್ರುವರಿ 2020, 21:16 IST
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ಹಕ್ಕುಪತ್ರ ಪ್ರದರ್ಶಿಸಿದರು. ಪಾಲಿಕೆ ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್‌, ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಮಂಜುನಾಥರಾಜು, ಮೇಯರ್‌ ಎಂ.ಗೌತಮ್‌ ಕುಮಾರ್, ಉಪಮೇಯರ್‌ ಸಿ.ಆರ್‌. ರಾಮಮೋಹನ್‌ ರಾಜು, ಪಶ್ಚಿಮ ವಲಯದ ವಿಶೇಷ ಆಯುಕ್ತ ಬಸವರಾಜ್‌ ಹಾಗೂ ಪೌರಕಾರ್ಮಿಕರ ಸಂಘಟನೆಯ ಪ್ರಮುಖರು ಇದ್ದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ಹಕ್ಕುಪತ್ರ ಪ್ರದರ್ಶಿಸಿದರು. ಪಾಲಿಕೆ ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್‌, ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಮಂಜುನಾಥರಾಜು, ಮೇಯರ್‌ ಎಂ.ಗೌತಮ್‌ ಕುಮಾರ್, ಉಪಮೇಯರ್‌ ಸಿ.ಆರ್‌. ರಾಮಮೋಹನ್‌ ರಾಜು, ಪಶ್ಚಿಮ ವಲಯದ ವಿಶೇಷ ಆಯುಕ್ತ ಬಸವರಾಜ್‌ ಹಾಗೂ ಪೌರಕಾರ್ಮಿಕರ ಸಂಘಟನೆಯ ಪ್ರಮುಖರು ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರವನ್ನು ಶುಚಿಯಾಗಿಟ್ಟುಕೊಳ್ಳುವ ಕಾಯಕಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು ಅವರು. ಸ್ವಂತ ಸೂರು ಹೊಂದುವ ಅವರ ಬದುಕಿನ ಬಹುದೊಡ್ಡ ಕನಸು ಮಂಗಳವಾರ ಸಾಕಾರಗೊಂಡಿತು.

ಪಶ್ಚಿಮ ವಲಯದ 60 ಕಾಯಂ ಪೌರಕಾರ್ಮಿಕರಿಗೆ ‘ಪೌರ ಕಾರ್ಮಿಕರ ಗೃಹಭಾಗ್ಯ’ ಯೋಜನೆಯಡಿ ಬಿಬಿಎಂಪಿ ವತಿಯಿಂದ ಮಂಗಳವಾರ ಫ್ಲ್ಯಾಟ್‌ಗಳ ಹಕ್ಕುಪತ್ರಗಳನ್ನು ವಿತರಿಸಲಾಯಿತು. ನಗರದ ಸ್ವಚ್ಛತೆ ಕಾಪಾಡಲು ಇಷ್ಟು ವರ್ಷ ಬೆವರು ಸುರಿಸಿದ್ದು ಸಾರ್ಥಕವಾಯಿತು ಎಂಬ ಸಂತೃಪ್ತ ಭಾವ ಅವರ ಮೊಗಗಳಲ್ಲಿ ಕಾಣಿಸುತ್ತಿತ್ತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಲೂರಿನಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಒಂದು ಅಡುಗೆ ಮನೆ, ಒಂದು ಕೊಣೆಯನ್ನು ಹೊಂದಿರುವ (ಒಂದು 1 ಬಿಎಚ್‌ಕೆ) ಫ್ಲ್ಯಾಟ್‌ಗಳನ್ನು ಪೌರಕಾರ್ಮಿಕರಿಗೆ ಹಂಚಿಕೆ ಮಾಡಲಾಗಿದೆ. ಇದಕ್ಕೆ ಪೌರ ಕಾರ್ಮಿಕರು ಯಾವುದೇ ಮೊತ್ತ ಪಾವತಿಸಬೇಕಿಲ್ಲ.

ADVERTISEMENT

‘ಬಾಡಿಗೆ ಮನೆಯಲ್ಲಿ ವಾಸವಿರುವ ನನಗೆ ಸ್ವಂತ ಮನೆ ಹೊಂದುವ ಕನಸಿತ್ತು. ಸರ್ಕಾರದ ನೆರವಿನಿಂದ ಅದು ನನಸಾಗಿದೆ. ನಮ್ಮಂತವರು ದುಡಿಮೆಯ ಹಣದಲ್ಲಿ ಈ ನಗರದಲ್ಲಿ ಮನೆ ಹೊಂದುವುದು ಸಾಧ್ಯವೇ ಇಲ್ಲ’ ಎಂದು ಪೌರಕಾರ್ಮಿಕ ಪೆಂಚಾಲಯ್ಯ ಅಭಿಪ್ರಾಯಪಟ್ಟರು.

ಪಾಲಿಕೆಯ 400 ಕಾಯಂ ಪೌರಕಾರ್ಮಿಕರಿಗೆ ‘ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ’ ಅಡಿ ಫ್ಲ್ಯಾಟ್‌ ಹಂಚಿಕೆ ಮಾಡಲಾಗುತ್ತಿದೆ. ಮೊದಲ ಎರಡು ಕಂತುಗಳಲ್ಲಿ 272 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

‘ಪಶ್ಚಿಮ ವಲಯದಲ್ಲಿ 89 ಮಂದಿ ಫಲಾನುಭವಿಗಳಿಗೆ ಫ್ಲ್ಯಾಟ್‌ ಹಂಚಿಕೆ ಮಾಡಲಾಗಿದೆ’ ಎಂದು ಜಂಟಿ ಆಯುಕ್ತ ಚಿದಾನಂದ್‌ ಮಾಹಿತಿ ನೀಡಿದರು.

ಪೌರಾಡಳಿತ ನಿರ್ದೇಶನಾಲಯವು ಈ ಯೋಜನೆಗಾಗಿ ಬಿಬಿಎಂಪಿಗೆ 2014-15ನೇ ಸಾಲಿನಲ್ಲಿ ₹ 10 ಕೋಟಿ ಹಾಗೂ 2015-16ನೇ ಸಾಲಿನಲ್ಲಿ ₹ 50 ಕೋಟಿ ಬಿಡುಗಡೆ ಮಾಡಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಮನೆ ಸಿಗದಿದ್ದುದಕ್ಕೆ ಬೇಸರ
ಮನೆಯ ಹಕ್ಕುಪತ್ರ ಸಿಗುತ್ತದೆ ಎಂಬ ಭರವಸೆಯಿಂದ ಕಾರ್ಯಕ್ರಮಕ್ಕೆ ಬಂದಿದ್ದ ಅನೇಕ ಪೌರಕಾರ್ಮಿಕರಿಗೆ ನಿರಾಸೆ ಕಾದಿತ್ತು. ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರೇ ಇರಲಿಲ್ಲ.

‘ನಮಗೂ ಮನೆ ಸಿಗುತ್ತದೆ ಎಂದು ಪೌರಕಾರ್ಮಿಕರ ಸಂಘದ ಪ್ರಮುಖರು ಹೇಳಿದ್ದರು. ಹಾಗಾಗಿ ನಡೆದುಕೊಂಡೇ ಕಾರ್ಯಕ್ರಮಕ್ಕೆ ಬಂದಿದ್ದೆ. ನನಗೆ ಹಕ್ಕುಪತ್ರ ನೀಡಲೇ ಇಲ್ಲ’ ಎಂದು ಲಿಂಗಮ್ಮ ಬೇಸರ ವ್ಯಕ್ತಪಡಿಸಿದರು.

‘ನನಗೆ ಏಕೆ ಹಕ್ಕುಪತ್ರ ನೀಡಿಲ್ಲ ಎಂದು ಪ್ರಶ್ನಿಸಿದರೆ ಅಧಿಕಾರಿಗಳು ಸರಿಯಾದ ಉತ್ತರವನ್ನು ನೀಡಿಲ್ಲ. ನಾನೂ 35 ವರ್ಷಗಳಿಗೂ ಹೆಚ್ಚು ಕಾಲ ಪೌರಕಾರ್ಮಿಕಳಾಗಿ ಕೆಲಸ ಮಾಡಿದ್ದೇನೆ’ ಎಂದು ಗಾಯತ್ರಿನಗರದ ನಿವಾಸಿ ಪೆಂಚಾಲಮ್ಮ ನೋವು ತೋಡಿಕೊಂಡರು.

ಆಯ್ಕೆಗೆ ಮಾನದಂಡಗಳೇನು?
*10ರಿಂದ 15 ವರ್ಷಗಳು ಕಾಯಂ ನೆಲೆಯಲ್ಲಿ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿರಬೇಕು

* ಒಂದು ಕುಟುಂಬಕ್ಕೆ ಒಂದು ಮನೆ ಮಾತ್ರ

* ಫಲಾನುಭವಿ ಸ್ವಂತ ಮನೆ ಹೊಂದಿರಬಾರದು

* ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಆದ್ಯತೆ

*
18 ವರ್ಷದವಳಿದ್ದಾಗಲೇ ಕಸ ಗುಡಿಸುವ ಕೆಲಸಕ್ಕೆ ಸೇರಿದ್ದೆ. ಇದುವರೆಗೆ ಯಾವುದೇ ವಸತಿ ನೀಡಿರಲಿಲ್ಲ. ನಿವೃತ್ತಿಯ ಅಂಚಿನಲ್ಲಿರುವಾಗಲಾದರೂ ಸ್ವಂತ ಮನೆ ಸಿಕ್ಕಿದ್ದು ಖುಷಿ ತಂದಿದೆ. ಇಷ್ಟು ವರ್ಷ ದುಡಿದದ್ದು ಸಾರ್ಥಕವಾಯಿತು
-ವೆಂಕಟಲಕ್ಷ್ಮಿ, ಶೇಷಾದ್ರಿಪುರ, ಶಾಸ್ತ್ರಿನಗರ

*
ಆಲೂರಿನಲ್ಲಿ ನಮಗೆ ಹಂಚಿಕೆ ಮಾಡಿರುವ ಮನೆಯನ್ನು ಇನ್ನೂ ನೋಡಿಲ್ಲ. ನೋಡಿಕೊಂಡು ಬಂದಿರುವ ಇತರ ಪೌರಕಾರ್ಮಿಕರು ಚೆನ್ನಾಗಿದೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಅಲ್ಲಿಗೆ ವಾಸ್ತವ್ಯವನ್ನು ಬದಲಾಯಿಸುತ್ತೇವೆ
-ವಜ್ರಮ್ಮ, ಜಕ್ಕರಾಯನಕೆರೆ ನಿವಾಸಿ

*
32 ವರ್ಷಗಳಿಂದ ನಗರದ ಸ್ವಚ್ಛತಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ನಿವೃತ್ತಿಗೆ ಇನ್ನು ಮೂರು ವರ್ಷಗಳಿವೆ. ನಿವೃತ್ತಿಯಾಗುವ ಮುನ್ನ ಸ್ವಂತ ಸೂರು ಸಿಕ್ಕಿದೆ. ನಮ್ಮ ಕೆಲಸವನ್ನು ಬಿಬಿಎಂಪಿ ಗುರುತಿಸಿದ್ದಕ್ಕೆ ಹೆಮ್ಮೆಯಾಗುತ್ತಿದೆ
-ಪ್ರಸಾದ್‌, ಶೇಷಾದ್ರಿಪುರ, ಹಳೆ ಸವಾರ್‌ಲೇನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.