ADVERTISEMENT

BBMP: ಆಸ್ತಿ ಹರಾಜಿಗೆ ಬಾರದ ಬಿಡ್ಡುದಾರರು!

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 15:59 IST
Last Updated 10 ಫೆಬ್ರುವರಿ 2025, 15:59 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ದೀರ್ಘಕಾಲದಿಂದ ತೆರಿಗೆ ಪಾವತಿಸದ ಆಸ್ತಿಗಳನ್ನು ಹರಾಜು ಮಾಡುವ ಬಿಬಿಎಂಪಿ ಪ್ರಕ್ರಿಯೆಗೆ ಪ್ರಾರಂಭಿಕ ಹಿನ್ನಡೆಯಾಗಿದೆ. ರಾಜರಾಜೇಶ್ವರಿನಗರದಲ್ಲಿ ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಾರೂ ಭಾಗವಹಿಸಲಿಲ್ಲ.

ಆರ್.ಆರ್. ನಗರ ವಲಯ ವ್ಯಾಪ್ತಿಯ ಲಗ್ಗೆರೆ, ಆರ್.ಆರ್. ನಗರ, ಲಕ್ಷ್ಮಿದೇವಿನಗರ, ಯಶವಂತಪುರ ಉಪ ವಿಭಾಗಗಳಲ್ಲಿ ತಲಾ 10, ಕೆಂಗೇರಿ ಹಾಗೂ ಹೇರೋಹಳ್ಳಿ ಉಪ ವಿಭಾಗಗಳಲ್ಲಿ ತಲಾ ಐದು ಆಸ್ತಿಗಳನ್ನು ಫೆಬ್ರುವರಿ 10ರಂದು ಹರಾಜು ಮಾಡಲು ನಿರ್ಧರಿಸಲಾಗಿತ್ತು.

ADVERTISEMENT

‘ಸೋಮವಾರ ಸುಮಾರು 15 ಆಸ್ತಿಗಳನ್ನು ಹರಾಜು ಮಾಡಲು ‘ಮ್ಯಾನ್ಯುಯಲ್’ ಆಗಿ ಆಸಕ್ತಿದಾರರನ್ನು ಆಹ್ವಾನಿಸಲಾಗಿತ್ತು. ಆದರೆ, ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಯಾವುದೇ ಬಿಡ್‌ದಾರರು ಬರಲಿಲ್ಲ’ ಎಂದು ಆರ್‌.ಆರ್. ನಗರ ವಲಯ ಆಯುಕ್ತ ಸತೀಶ್‌ ತಿಳಿಸಿದರು.

‘ವಲಯದಲ್ಲಿ 50 ಆಸ್ತಿಗಳನ್ನು ಹರಾಜು ಮಾಡಲು ಗುರುತಿಸಲಾಗಿದೆ. ಅದರಲ್ಲಿ ಶೇಕಡ 30ರಷ್ಟು ಮಾಲೀಕರು ತೆರಿಗೆ ಪಾವತಿಸಿದ್ದಾರೆ. ಉಳಿದ ಆಸ್ತಿಗಳ ಹರಾಜು ಪ್ರಕ್ರಿಯೆ ಫೆ.13ರಂದು ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಹರಾಜು ಪ್ರಕ್ರಿಯೆ ಎಲ್ಲವೂ ‘ಮ್ಯಾನ್ಯುಯಲ್‌’ ಆಗಿದೆ. ಹೀಗಾಗಿ, ಆಸಕ್ತರು ಕಡಿಮೆಯಾಗಿರಬಹುದು. ಮುಂದಿನ ದಿನಗಳಲ್ಲಿ, ಆನ್ಲೈನ್‌ ಮೂಲಕ ಇ–ಹರಾಜು ನಡೆಸುವ ಯೋಜನೆ ಇದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ನಿರಂತರ ಪ್ರಕ್ರಿಯೆಯಾಗಿರುತ್ತದೆ’ ಎಂದರು.

ಪಾಲಿಕೆಯ ಎಂಟು ವಲಯಗಳಲ್ಲಿ ದೀರ್ಘಕಾಲದಿಂದ ಆಸ್ತಿ ತೆರಿಗೆ ಪಾವತಿಸದವರ 608 ಆಸ್ತಿಗಳನ್ನು ಹರಾಜು ಹಾಕಲಾಗುತ್ತಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ಜನವರಿ 31ರಂದು ಪ್ರಕಟಿಸಿದ್ದರು. ಅದರಂತೆ ವಲಯಗಳಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಆರ್.ಆರ್. ನಗರ ವಲಯದಲ್ಲಿ ಮೊದಲ ಹರಾಜು ಪ್ರಕ್ರಿಯೆ ಸೋಮವಾರ ನಡೆಯಿತು.

ಪೂರ್ವ ವಲಯದಲ್ಲಿ 118 ಆಸ್ತಿಗಳು, ಪಶ್ಚಿಮ ವಲಯದಲ್ಲಿ 120, ಮಹದೇವಪುರ ವಲಯದಲ್ಲಿ 60, ಯಲಹಂಕ ವಲಯದಲ್ಲಿ 40, ದಾಸರಹಳ್ಳಿಯಲ್ಲಿ 41 ಆಸ್ತಿಗಳ ಹರಾಜು ಪ್ರಕ್ರಿಯೆ ಫೆ.13ರಂದು (ಗುರುವಾರ) ನಡೆಯಲಿದೆ. ದಕ್ಷಿಣ ವಲಯದಲ್ಲಿ 109, ಬೊಮ್ಮನಹಳ್ಳಿ ವಲಯದಲ್ಲಿ 70 ಆಸ್ತಿಗಳ ಹರಾಜು ಪ್ರಕ್ರಿಯೆ ಫೆ.14ರಂದು ನಡೆಯಲಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ₹2 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಇರಿಸಿಕೊಂಡಿರುವವರಿಂದ ಸುಮಾರು ₹390 ಕೋಟಿ ಪಾವತಿಯಾಗಬೇಕಿದೆ. ಹರಾಜಿನಂತಹ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸಲು ಆಸ್ತಿ ತೆರಿಗೆದಾರರು ಬಾಕಿ ಪಾವತಿಸಬೇಕು’ ಎಂದು ಮುನೀಶ್‌ ಮೌದ್ಗಿಲ್‌ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.