ಬೆಂಗಳೂರು: ಬಜೆಟ್‌ನಲ್ಲಿ ಕೆರೆ ಅಭಿವೃದ್ಧಿ, ನಿರ್ವಹಣೆ, ಹೊಸ ಉದ್ಯಾನಗಳ ಅಭಿವೃದ್ಧಿ ಸೇರಿದಂತೆ 15 ಲಕ್ಷ ಸಸಿಗಳನ್ನು ಪ್ರತಿ ವರ್ಷವೂ ನೆಡುವುದಕ್ಕೆ ಅನುದಾನ ಒದಗಿಸಲಾಗಿದ್ದು, ವಾಯು ಮಾಲಿನ್ಯ ನಿಯಂತ್ರಿಸುವ ಜೊತೆಗೆ ನಗರವನ್ನು ಹಸಿರು ವಲಯವನ್ನಾಗಿಸುವ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.
2023–24ನೇ ಸಾಲಿನಲ್ಲಿ ₹35 ಕೋಟಿ ವೆಚ್ಚದಲ್ಲಿ 12 ಕೆರೆಗಳ ಸಮಗ್ರ ಅಭಿವೃದ್ಧಿ ಮಾಡಲಾಗುತ್ತದೆ. ಎಲ್ಲ ಕೆರೆಗಳಿಗೆ ಚೈನ್–ಲಿಂಕ್ ಬೇಲಿ ನಿರ್ಮಾಣ ಮಾಡಲಾಗುತ್ತದೆ. ತೂಬು ಅಳವಡಿಸುವ ಕಾರ್ಯ ಆರಂಭವಾಗಿದ್ದು, ಉಳಿದಿರುವ ಕೆರೆಗಳಿಗೆ ತೂಬು ಅಳವಡಿಸಲು ₹15 ಕೋಟಿ ಮೀಸಲಿಡಲಾಗಿದೆ.
ನಗರದಲ್ಲಿ 1,233 ಉದ್ಯಾನಗಳಿದ್ದು, 15 ಹೊಸ ಉದ್ಯಾನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 2022–23ರವರೆಗೆ ಪ್ರತಿ ವರ್ಷ 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದ್ದು, ಈ ಸಂಖ್ಯೆಯನ್ನು 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. 5 ಸಸ್ಯಕ್ಷೇತ್ರಗಳ ಜೊತೆಗೆ ಹೆಬ್ಬಾಳ, ದಾಸರಹಳ್ಳಿಯಲ್ಲಿ ಮೂರು ಹೈಟೆಕ್ ನರ್ಸರಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಸಿಗಳನ್ನು ಬೆಳೆಸಲೆಂದು ₹40 ಕೋಟಿ ಮೀಸಲಿಡಲಾಗಿದೆ.
ಪ್ರವಾಸಿ ಕಾರಿಡಾರ್
ಕೆಂಪಾಬುಧಿ ಕೆರೆ–ಬುಲ್‌ಟೆಂಪಲ್ ರಸ್ತೆ ಪರಿಸರ, ಸ್ಯಾಂಕಿ ಕೆರೆ–ಕಾಡು ಮಲ್ಲೇಶ್ವರ ದೇಗುಲದ ಪರಿಸರ ಹಾಗೂ ಹಲಸೂರು ಕೆರೆ–ಸೋಮೇಶ್ವರ ದೇಗುಲ ಪರಿಸರಗಳನ್ನು ಪ್ರವಾಸಿ ಕಾರಿಡಾರ್‌ಗಳನ್ನಾಗಿ ಅಭಿವೃದ್ಧಿಪಡಿಸಲು ₹180 ಕೋಟಿ ಮೀಸಲಿಡಲಾಗಿದೆ. ಕಾರಂಜಿ, ಆಟದ ಸ್ಥಳ, ಆಹಾರ ಮಳಿಗೆ ಹಾಗೂ ವಿರಮಿಸುವ ಸೌಲಭ್ಯಗಳುಳ್ಳ 10 ‘ಸಿಟಿ ಪ್ಲಾಜಾ’ಗಳ ನಿರ್ಮಾಣಕ್ಕೆ ₹50 ಕೋಟಿ ನೀಡಲಾಗಿದೆ.
‘ರೂಫ್–ಟಾಪ್ ನೆಟ್ ಮೀಟರಿಂಗ್’
ಪಾಲಿಕೆ ವ್ಯಾಪ್ತಿಯಲ್ಲಿ ಸೋಡಿಯಂ ವೇಪರ್ ಲೈಟ್‌ಗಳನ್ನು ಬದಲಿಸಿ, ವಿದ್ಯುತ್ ಬಳಕೆ ಕಡಿತಗೊಳಿಸಲು ಎಲ್‌ಇಡಿ ಬಲ್ಬ್‌ಗಳನ್ನು ಹಾಕಲಾಗುತ್ತದೆ. ಇದನ್ನು ಹಂತಹಂತವಾಗಿ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ₹17.25 ಕೋಟಿ ಮೀಸಲಿಡಲಾಗಿದೆ. ಅಷ್ಟೇ ಅಲ್ಲದೆ, 15ನೇ ಹಣಕಾಸು ಆಯೋಗದ ಅನುದಾನದಡಿ ಪಾಲಿಕೆಯ ಎಲ್ಲ ಕಟ್ಟಡಗಳ ಮೇಲೆ ‘ರೂಫ್–ಟಾಪ್ ನೆಟ್ ಮೀಟರಿಂಗ್’ ಅಳವಡಿಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.