ADVERTISEMENT

BBMP Budget 2023 | 40 ನಿಮಿಷ ಓದು, ಕವಿಗಳ ಸಾಲು ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 21:22 IST
Last Updated 2 ಮಾರ್ಚ್ 2023, 21:22 IST
ಬಿಬಿಎಂಪಿ ಬಜೆಟ್ ಮಂಡಿಸಿದ ಜಯರಾಂ ರಾಯಪುರ
ಬಿಬಿಎಂಪಿ ಬಜೆಟ್ ಮಂಡಿಸಿದ ಜಯರಾಂ ರಾಯಪುರ   

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು 39 ಪುಟಗಳ ಬಜೆಟ್‌ ಪುಸ್ತಕವನ್ನು 42 ನಿಮಿಷಗಳಲ್ಲಿ ಓದಿದರು.

ಬೆಂಗಳೂರು ರಾಜ್ಯದ ರಾಜಧಾನಿಯಾಗಿ ಮಾತ್ರ ಉಳಿಯದೆ, ತಂತ್ರಜ್ಞಾನದ ರಾಜಧಾನಿ, ಹೊಸ ಉದ್ಯಮಗಳ ತವರು, ಕಾಸ್ಮೋಪಾಲಿಟನ್‌ ನವನಗರ ಎಂದು ಬಣ್ಣಿಸಿದರಲ್ಲದೆ, ‘ಮೆಲ್ಟಿಂಗ್‌ ಪಾಟ್‌’ ಎಂದೂ ಹೇಳಿದರು. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಡಳಿತಾಧಿಕಾರಿ ರಾಕೇಶ್‌ ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

‘ಬೆಂಗಳೂರಿನ ಬೆಳವಣಿಗೆ ಎಂದರೆ ಕೇವಲ ರಸ್ತೆ– ಉದ್ಯಾನಗಳಲ್ಲ, ಬದಲಿಗೆ ಶಾಲೆಗಳು, ಆಸ್ಪತ್ರೆಗಳು, ಜೈಲುಗಳು ಮತ್ತು ಶೌಚಾಲಯಗಳು’ ಎಂಬ ಕವಿ ಎಚ್‌.ಎಸ್‌. ಶಿವಪ್ರಕಾಶ್‌ ಅವರ ಸಾಲುಗಳನ್ನು ಉಲ್ಲೇಖಿಸಿದರು. ಕೊನೆಗೆ, ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ನಾಣ್ಣುಡಿಯೊಂದಿಗೆ ಬಜೆಟ್‌ ಮಂಡಣೆ ಮುಗಿಸಿದರು.

ADVERTISEMENT

ಆನ್‌ಲೈನ್‌ನಲ್ಲೇ ಅನುಮೋದನೆ

ನಗರ ಯೋಜನೆ ಶುಲ್ಕದಲ್ಲಿ ಕಳೆದ ಬಾರಿಗಿಂತ (₹526 ಕೋಟಿ) ಹೆಚ್ಚಿನ ಸಂಗ್ರಹ ನಿರೀಕ್ಷಿಸಿದ್ದು, ₹658 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಕಟ್ಟಡ ನಿರ್ಮಾಣ ಅನುಮತಿಗೆ ತಂತ್ರಾಂಶ ಜಾರಿಯಾಗಲಿದ್ದು, ಬೆಸ್ಕಾಂ, ಎಚ್‌ಎಎಲ್‌, ಬಿಎಂಆರ್‌ಸಿಎಲ್‌, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಆನ್‌ಲೈನ್‌ನಲ್ಲೇ ಅನುಮೋದನೆ ನೀಡಲಿವೆ.

ಸಿಬ್ಬಂದಿಗೆ ಆವಿಷ್ಕಾರ ಪ್ರಶಸ್ತಿ

ಹೊಸ ವ್ಯವಸ್ಥೆ, ತಂತ್ರಾಂಶ, ವಿನ್ಯಾಸ, ಸಮಸ್ಯೆ ನಿವಾರಣೆ ಸೂತ್ರ ಅಥವಾ ಬೇರೆ ಯಾವುದೇ ಆವಿಷ್ಕಾರವನ್ನು ಉತ್ತೇಜಿಸಲು, ಅಧಿಕಾರಿ– ಸಿಬ್ಬಂದಿಯಲ್ಲಿನ ಗುಣಾತ್ಮಕ ಪರಿವರ್ತನೆಗೆ ‘ನಾಡಪ‍್ರಭು ಕೆಂಪೇಗೌಡ ಆವಿಷ್ಕಾರ’ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ. ಈ ಪ್ರಶಸ್ತಿ ಮೊತ್ತ ₹2 ಲಕ್ಷ. ಇದಕ್ಕೆ ನಿಯಮ, ಆಯ್ಕೆ ಪ್ರಕ್ರಿಯೆ ಸದ್ಯವೇ ಜಾರಿಯಾಗಲಿದೆ.

ಎಲ್ಲ ಇಲಾಖೆಗೂ ಗುರಿ

ಕಂದಾಯ ವಿಭಾಗಕ್ಕಿರುವ ತೆರಿಗೆ ಸಂಗ್ರಹ ಗುರಿಯ ರೀತಿಯಲ್ಲಿ ಎಲ್ಲ ವಿಭಾಗಗಳಿಗೂ ‘ಕಾರ್ಯಯೋಜನೆ ಗುರಿ’ ನೀಡಲಾಗುತ್ತದೆ. ಅದನ್ನು ಮುಟ್ಟುವ ಅಧಿಕಾರಿ–ಸಿಬ್ಬಂದಿಗೆ ಪುರಸ್ಕಾರ, ಉತ್ತೇಜನ ನೀಡಲಾಗುತ್ತದೆ. ಟಿ.ಎಂ. ವಿಜಯಭಾಸ್ಕರ್‌ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ವರದಿ ಮುಖ್ಯಮಂತ್ರಿಯವರ ಮುಂದಿದ್ದು, ಸರ್ಕಾರದಿಂದ ಅನುಮೋದನೆಯಾದ ಮೇಲೆ ಜಾರಿಗೊಳಿಸಲಾಗುವುದು.

ನಿವೃತ್ತ ಪೌರಕಾರ್ಮಿಕರು ಮತ್ತು ಸಿಬ್ಬಂದಿಯ ಆರೋಗ್ಯ ಸೌಲಭ್ಯಕ್ಕೆ ‘ಬಿಬಿಎಂಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ’ ಹೆಸರಿನಲ್ಲಿ ಸೊಸೈಟಿ ಸ್ಥಾಪನೆ. ₹10 ಕೋಟಿ ಕಾರ್ಪಸ್‌ ಫಂಡ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.