ADVERTISEMENT

ಬಜೆಟ್‌ ಮಂಡನೆಯಾಗದೇ ಬಿಕ್ಕಟ್ಟು ಸೃಷ್ಟಿ

2020–21ನೇ ಸಾಲಿನ ವೆಚ್ಚಕ್ಕೆ ಲೇಖಾನುದಾನವನ್ನೂ ಪಡೆಯದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ

ಪ್ರವೀಣ ಕುಮಾರ್ ಪಿ.ವಿ.
Published 11 ಏಪ್ರಿಲ್ 2020, 21:18 IST
Last Updated 11 ಏಪ್ರಿಲ್ 2020, 21:18 IST
   

ಬೆಂಗಳೂರು: ಹೊಸ ಆರ್ಥಿಕ ವರ್ಷಕ್ಕೆ ಮುನ್ನ (ಏಪ್ರಿಲ್‌ 1ರ ಒಳಗೆ) 2020–21ನೇ ಸಾಲಿನ ಬಜೆಟ್‌ಗೆ ಕೌನ್ಸಿಲ್‌ನ ಅಂಗೀಕಾರ ಪಡೆಯದೆ, ಇನ್ನೊಂದೆಡೆ ಲೇಖಾನುದಾನವನ್ನೂ ಪಡೆಯದೇ ಬಿಬಿಎಂಪಿ ಇಕ್ಕಟ್ಟಿಗೆ ಸಿಲುಕಿದೆ. ಕೊರೊನಾ ಸೋಂಕು ಹಬ್ಬುತ್ತಿರುವಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಯಮಬಾಹಿರವಾಗಿ ವೆಚ್ಚ ಮಾಡಬೇಕಾದ ಪರಿಸ್ಥಿತಿಯನ್ನು ಪಾಲಿಕೆ ಸೃಷ್ಟಿಸಿಕೊಂಡಿದೆ.

1976ರ ಕೆಎಂಸಿ ಕಾಯ್ದೆ ಪ್ರಕಾರ ಬಿಬಿಎಂಪಿಯು ಬಜೆಟ್‌ ಅನ್ನು ಅಂಗೀಕರಿಸಿ ಅನುಮೋದನೆಗಾಗಿ 2020ರ ಮಾರ್ಚ್‌ ಮೊದಲನೇ ವಾರದೊಳಗೆ ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ಆದರೆ ಆಡಳಿತ ಪಕ್ಷವು ಮಾರ್ಚ್‌ ಕೊನೆಯ ವಾರದಲ್ಲಿ ಬಜೆಟ್‌ ಮಂಡನೆಗೆ ಸಿದ್ಧತೆ ನಡೆಸಿತ್ತು. ಅಷ್ಟರಲ್ಲಿ ಲಾಕ್‌ಡೌನ್‌ ಜಾರಿಯಾಯಿತು. ಆ ಬಳಿಕವೂ ಮಾರ್ಚ್ 31ರ ಒಳಗೆ ಬಜೆಟ್‌ ಅಥವಾ ಲೇಖಾನುದಾನ ಪ್ರಸ್ತಾವಗಳಿಗೆ ಸರ್ಕಾರದ ಅನುಮೋದನೆ ಪಡೆಯಲು ಅವಕಾಶವಿತ್ತು. ಬಿಬಿಎಂಪಿ ಅದನ್ನೂ ಮಾಡಿಲ್ಲ. ಹಾಗಾಗಿ ಮಾರ್ಚ್‌ 31ರ ಬಳಿಕ ಪಾಲಿಕೆ ಯಾವುದೇ ವೆಚ್ಚ ಮಾಡುವಂತಿಲ್ಲ.

ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್, 2020–21ನೇ ಸಾಲಿನ ಬಜೆಟ್‌ ಆಧಾರದ ಮೇಲೆ ವೇತನ, ಪಿಂಚಣಿ, ನಿರ್ವಹಣೆ, ಆರೋಗ್ಯ ಇಲಾಖೆ ಬಿಲ್‌ ಹಾಗೂ ಕೆಲವು ಅನಿವಾರ್ಯ ಬಿಲ್‌ಗಳ ಪಾವತಿಗೆ ಬಜೆಟ್‌ ಗಾತ್ರದ ಶೇಕಡ 30ರಷ್ಟು ಖರ್ಚು ಮಾಡಲು ಸರ್ಕಾರದ ಅನುಮೋದನೆ ಕೋರಿದ್ದಾರೆ. ಬಜೆಟ್‌ನ ನಿರೀಕ್ಷಿತ ಆದಾಯ₹ 9,000 ಕೋಟಿ ಎಂದು ಅಂದಾಜಿಸಿ ₹ 3000 ಕೋಟಿ ವೆಚ್ಚಕ್ಕೆ ಸಮ್ಮತಿಸುವಂತೆ ವಿನಂತಿಸಿದ್ದಾರೆ. ಆದರೆ, ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಕೌನ್ಸಿಲ್‌ ಅಥವಾ ಸರ್ಕಾರ ಅನುಮೋದನೆ ಪಡೆಯದೆಯೇ ₹ 1 ಕೋಟಿವರೆಗೆ ಮಾತ್ರ ಖರ್ಚು ಮಾಡಲು ಆಯುಕ್ತರಿಗೆ ಅಧಿಕಾರ ಇದೆ.

ADVERTISEMENT

ಅಧಿಕಾರಿಗಳ ವಿರುದ್ಧ ಆಡಳಿತ ಪಕ್ಷ ಆರೋಪ

ಬಜೆಟ್‌ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಎಚ್ಚೆತ್ತ ಮೇಯರ್‌ ಎಂ.ಗೌತಮ್‌ ಕುಮಾರ್‌, ಉಪ ಮೇಯರ್‌ ರಾಮಮೋಹನರಾಜು ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಅವರಿಗೆ ಏ. 8ರಂದು ಪತ್ರ ಬರೆದು ಮುಂದೇನು ಮಾಡಬೇಕು ಎಂಬ ಬಗ್ಗೆ ವಿವರಣೆ ಕೋರಿದ್ದರು.

‘ಪಾಲಿಕೆಯ 2020-21ನೇ ಸಾಲಿನ ಬಜೆಟ್‌ ಪಟ್ಟಿಯನ್ನು ಆಯುಕ್ತರು 2020ರ ಜ.15ರ ಒಳಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿಗೆ ಸಲ್ಲಿಸಬೇಕಾಗಿತ್ತು. ಫೆಬ್ರುವರಿ ಮೊದಲನೇ ವಾರದಲ್ಲಿ ಸ್ಥಾಯಿಸಮಿತಿ ಸಭೆಯ ಮುಂದೆ ಅದನ್ನು ಮಂಡಿಸಬೇಕಿತ್ತು. ಆದರೆ, ಮುಖ್ಯ ಲೆಕ್ಕಾಧಿಕಾರಿ, ವಿಶೇಷ ಆಯುಕ್ತರು (ಹಣಕಾಸು) ಹಾಗು ಆಯುಕ್ತರು ಪಾಲಿಕೆಯ‌ ಬಜೆಟ್‌ ಪಟ್ಟಿಯನ್ನು ಸಲ್ಲಿಸುವಾಗ ವಿಳಂಬ ಮಾಡಿದ್ದಾರೆ’ ಎಂದು ಅವರು ಈ ಪತ್ರದಲ್ಲಿ ಆರೋಪಿಸಿದ್ದಾರೆ.

‘ಬಜೆಟ್‌ ಪಟ್ಟಿಯನ್ನು ಪರಾಮರ್ಶಿಸಿ ಕೌನ್ಸಿಲ್‌ನಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಲಾಕ್‌-ಡೌನ್‌ ಜಾರಿಯಾಯಿತು. ಹಾಗಾಗಿ ಬಜೆಟ್‌ ಮಂಡನೆ ಸಾಧ್ಯವಾಗಿಲ್ಲ. ಬಜೆಟ್‌ ಕುರಿತು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾರ್ಗದರ್ಶನವನ್ನು ನೀಡುವಂತೆ ಕೋರಿದ್ದಾರೆ. ಆದರೆ ಇನ್ನೂ ಅಲ್ಲಿಂದ ಪ್ರತಿಕ್ರಿಯೆ ಬಂದಿಲ್ಲ.

ಬಜೆಟ್‌ ಮಂಡನೆಗೆ ವಿಡಿಯೊ ಕಾನ್ಫರೆನ್ಸ್‌

ಬಿಬಿಎಂಪಿ ಕೌನ್ಸಿಲ್‌ ಹಾಗೂ ಸ್ಥಾಯಿ ಸಮಿತಿಗಳ ಸಭೆ ನಡೆಸಲು ಅವಕಾಶವಿಲ್ಲದ ಕಾರಣ ವಿಡಿಯೊ ಕಾನ್ಫರೆನ್ಸ್‌ ಮೂಲಕ ತುರ್ತಾಗಿ ಬಜೆಟ್‌ ಮಂಡಿಸಲು ಆಡಳಿತ ಪಕ್ಷ ಮುಂದಾಗಿದೆ.

‘ಪಾಲಿಕೆ ಕೇಂದ್ರ ಕಚೇರಿಯಲ್ಲಿ, ನಾನು, ಮೇಯರ್‌, ಉಪಮೇಯರ್‌, ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು, ಆಯುಕ್ತರು ಹಾಗೂ ಪ್ರಮುಖ ಸಚಿವರು ಮಾತ್ರ ಬಜೆಟ್‌ ಮಂಡನೆ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ಪಾಲಿಕೆ ಸದಸ್ಯರು ವಲಯ ಕಚೇರಿಗಳಲ್ಲಿ ಕುಳಿತು ಇದನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸುತ್ತೇವೆ’ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಜೆಟ್‌ ಮಂಡನೆಗೆ ದಿನಾಂಕದ ಬಗ್ಗೆ ಸೋಮವಾರ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆಯ ಹಿರಿಯ ಸದಸ್ಯರೊಬ್ಬರು, ‘ವಿಡಿಯೊ ಕಾನ್ಫರೆನ್ಸ್‌ ಮೂಲಕ ಬಜೆಟ್‌ ಮಂಡಿಸುವುದು ಸೂಕ್ತ ಅಲ್ಲ. ಕೌನ್ಸಿಲ್‌ ಸಭೆಯಲ್ಲೇ ಬಜೆಟ್‌ ಅಂಗೀಕರಿಸಬೇಕು. ಇದಕ್ಕೆ ಕೆಎಂಸಿ ಕಾಯ್ದೆ ಪ್ರಕಾರ ಮೂರನೇ ಎರಡರಷ್ಟು ಬಹುಮತ ಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.