ADVERTISEMENT

‘ವಾರ್ಡ್ ನಿರ್ವಹಣೆಗೆ ತಲಾ₹ 3 ಕೋಟಿ ಮೀಸಲಿಡಿ’

ಪಾಲಿಕೆ ಬಜೆಟ್: ಜನಪ್ರತಿನಿಧಿಗಳ ಜೊತೆ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 22:20 IST
Last Updated 17 ಮಾರ್ಚ್ 2022, 22:20 IST

ಬೆಂಗಳೂರು: ಬಿಬಿಎಂಪಿಯ 2022-23ನೇ ಸಾಲಿನ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಬೇಕಾದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ಸಮಾಲೋಚನೆ ನಡೆಸಿದರು.

ರಾಕೇಶ್ ಸಿಂಗ್, ‘ಜನರಿಗೆ ಮೂಲಸೌಕರ್ಯ ಒದಗಿಸುವುದು ಪಾಲಿಕೆಯ ಜವಾಬ್ದಾರಿ ಬಿಬಿಎಂಪಿಯಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಸುಸ್ಥಿರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪಾಲಿಕೆಯ ವರಮಾನ ಆಧರಿಸಿ ಕಾರ್ಯಕ್ರಮ ರೂಪಿಸಬೇಕಿದೆ’ ಎಂದರು.

ಗೌರವ್ ಗುಪ್ತ, ‘ಆಸ್ತಿ ತೆರಿಗೆ ಸಂಗ್ರಹದ ಗುರಿ ಸಾಧಿಸಲು ಆದ್ಯತೆ ನೀಡಲಾಗಿದೆ. ನಗರದಲ್ಲಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಕೆಲಸಕ್ಕೆ ವೇಗ ನೀಡಲಾಗಿದೆ. ಅವುಗಳ ಸಮರ್ಪಕ ನಿರ್ವಹಣೆಗೂ ಕ್ರಮಕೈಗೊಳ್ಳಲಾಗಿದೆ’ ಎಂದರು.

ADVERTISEMENT

ಪ್ರತಿ ವಾರ್ಡ್‌ನ ವಾರ್ಷಿಕ ನಿರ್ವಹಣೆಗೆ ತಲಾ ₹ 2 ಕೋಟಿಯಿಂದ ₹ 3 ಕೋಟಿ ಅನುದಾನವನ್ನು ಕಡ್ಡಾಯವಾಗಿ ಮೀಸಲಿಟ್ಟಲ್ಲಿ ತಳಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒತ್ತಾಯಿಸಿದರು. ‘ಬಿ ಖಾತಾಗಳನ್ನು ಎ ಖಾತಾವನ್ನಾಗಿ ಪರಿವರ್ತಿಸುವ ಮೂಲಕ ಹಾಗೂ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ₹5 ಲಕ್ಷ ಮೌಲ್ಯದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಮೂಲಕ ವರಮಾನ ಹೆಚ್ಚಿಸಿಕೊಳ್ಳಬಹುದು. ಭೋಗ್ಯಕ್ಕೆ ನೀಡಿರುವ ಬಿಬಿಎಂಪಿ ಆಸ್ತಿಗಳಿಂದ ಬಾಕಿ ಮೊತ್ತ ಸಂಗ್ರಹಿಸಬೇಕು. ಅನಧಿಕೃತ ಕಟ್ಟಡಗಳನ್ನು ಗುರುತಿಸಿ ಅವುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು ಕೂಡ ವರಮಾನ ಹೆಚ್ಚಳಕ್ಕೆ ನೆರವಾಗಲಿದೆ. ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಸಂಗ್ರಹಿಸುವ ತೆರಿಗೆಯು ವಸ್ತುಸ್ಥಿತಿಗೆ ತಾಳೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಕೆಲವು ಶಾಸಕರು ಸಲಹೆ ನೀಡಿದರು.

‘ಕಲ್ಯಾಣ ಕಾರ್ಯಕ್ರಮಗಳ ಅಡಿ ಒಂಟಿ ಮನೆಗಳಿಗೆ, ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲು ಅನುದಾನ ಮೀಸಲಿಡಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.