ADVERTISEMENT

ಲಾಕ್‌ಡೌನ್‌ ನಡುವೆ ಬಿಬಿಎಂಪಿ ಬಜೆಟ್ ಇಂದು

ಇದೇ ಮೊದಲ ಬಾರಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಡನೆ *ಕೊರೊನಾ ಸೋಂಕು ನಿಯಂತ್ರಣಕ್ಕೆ ಒತ್ತು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 21:51 IST
Last Updated 19 ಏಪ್ರಿಲ್ 2020, 21:51 IST
   

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣದ ಲಾಕ್‌ಡೌನ್‌ ನಡುವೆ ಬಿಬಿಎಂಪಿಯ ಬಜೆಟ್‌ ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ಮಂಡನೆಯಾಗಲಿದೆ.

ಈ ಬಾರಿಯ ಬಜೆಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಜೊತೆ ಕೊರೊನಾ ಸೋಂಕು ತಡೆಯುವ ಕಾರ್ಯಕ್ಕೇ ಆದ್ಯತೆ ನೀಡುವ ನಿರೀಕ್ಷೆ ಇದೆ.

ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆಯುವ ಸಭೆಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಮಧ್ಯಾಹ್ನ 12 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ.ಉಪಮೇಯರ್, ಬಿಬಿಎಂಪಿ ಆಯುಕ್ತರು, ಸ್ಥಾಯಿ ಸಮಿತಿ ಅಧ್ಯಕ್ಷರು, ಆಡಳಿತ ಪಕ್ಷದ ನಾಯಕರು, ಹಿರಿಯ ಅಧಿಕಾರಿಗಳು ಸೇರಿದಂತೆ ಬೆರಳೆಣಿಕೆಯಷ್ಟೇ ಮಂದಿ ಸಭೆಯಲ್ಲಿ ಹಾಜರಿರುತ್ತಾರೆ. ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ಪಾಲಿಕೆ ಸದಸ್ಯರು ಆಯಾ ವಲಯಗಳ ಕಚೇರಿಯಲ್ಲಿ ವಿಡಿಯೊ ಕಾನ್ಫೆರೆನ್ಸ್ ಮೂಲಕ ಬಜೆಟ್ ವೀಕ್ಷಿಸಲಿದ್ದಾರೆ. ಇದಕ್ಕೆ ಬೇಕಾದ ಸಕಲ ವ್ಯವಸ್ಥೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆ.

ADVERTISEMENT

ಕುಗ್ಗಲಿದೆ ಬಜೆಟ್ ಗಾತ್ರ

ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ತೆರಿಗೆ ಮತ್ತು ಇತರ ಮೂಲಗಳ ವರಮಾನವನ್ನು ಪರಿಗಣಿಸಿ ಈ ಬಾರಿ ಬಜೆಟ್‌ ಗಾತ್ರ 9 ಸಾವಿರ ಕೋಟಿಗೆ ಸೀಮಿತಗೊಳಿಸಬೇಕು ಎಂದು ಸಲಹೆ ನೀಡಿದ್ದರು. ಆಸ್ತಿ ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷವೂ ಗುರಿ ಸಾಧನೆ ಆಗಿರಲಿಲ್ಲ. ಹಾಗಾಗಿ ಉತ್ಪ್ರೇಕ್ಷಿತ ಗುರಿ ನಿಗದಿಪಡಿಸುವುದು ಸಮಂಜಸವಲ್ಲ ಎಂದು ಸಲಹೆ ನೀಡಿದ್ದಾರೆ. ಇಷ್ಟಾಗಿಯೂ ಆಡಳಿತ ಪಕ್ಷವು ₹11 ಸಾವಿರ ಕೋಟಿಗೂ ಮೀರಿದ ಬಜೆಟ್‌ ಮಂಡನೆಗೆ ಸಿದ್ಧತೆ ನಡೆಸಿದೆ ಎಂದು ಆಡಳಿತ ಪಕ್ಷದ ಮೂಲಗಳು ತಿಳಿಸಿವೆ.

2019–20ನೇ ಸಾಲಿನಲ್ಲಿ ₹12,958 ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಲಾಗಿತ್ತು. ಬಜೆಟ್‌ನ ಲೆಕ್ಕಾಚಾರ ಅವಾಸ್ತವಿಕವಾಗಿದ್ದು, ಅದರ ಗಾತ್ರವನ್ನು ₹ 9 ಸಾವಿರ ಕೋಟಿಗೆ ತಗ್ಗಿಸಬೇಕು ಎಂದು ಆಗಿನ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಬಳಿಕ ಇಲಾಖೆಯು ₹11,600 ಕೋಟಿ ಗಾತ್ರದ ಬಜೆಟ್‌ಗೆ ಒಪ್ಪಿಗೆ ಸೂಚಿಸಿತ್ತು.

ಲಾಕ್‌ಡೌನ್‌ನಿಂದಾಗಿ ವರಮಾನ ಕಡಿಮೆಯಾಗುವ ನಿರೀಕ್ಷೆ ಇದೆ. ಹೀಗಾಗಿ, ₹11 ಸಾವಿರ ಕೋಟಿಗೂ ಕಡಿಮೆ ಮೊತ್ತದ ಬಜೆಟ್ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಂಕಟದ ಕಾಲದಲ್ಲೂ ಚುನಾವಣಾ ಘೋಷಣೆಗೆ ಮಣೆ?

ಬಿಬಿಎಂಪಿಯ ಐದು ವರ್ಷಗಳ ಅಧಿಕಾರದ ಅವಧಿ ಇದೇ ಸೆಪ್ಟೆಂಬರ್‌ಗೆ ಕೊನೆಯಾಗಲಿದೆ. ಹಾಗಾಗಿ ಆಡಳಿತ ಪಕ್ಷವು ಕೊರೋನಾ ಬಾಧೆಯ ಸಂಕಟದ ಸ್ಥಿತಿಯಲ್ಲಿ ಈ ರೋಗ ನಿಯಂತ್ರಣಕ್ಕೂ ಆದ್ಯತೆ ಬೇಕಾದ ಅನಿವಾರ್ಯ ಸ್ಥಿತಿಯಲ್ಲೂ ಚುನಾವಣೆಯ ಮೇಲೆ ಕಣ್ಣಿಟ್ಟು ಜನಪ್ರಿಯ ಘೋಷಣೆಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ಬಡವರ ಪುನರ್ವಸತಿ, ಚಿಕಿತ್ಸೆ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ವಾಸ್ತವಿಕ ಮತ್ತು ಉಳಿತಾಯ ಬಜೆಟ್ ಆಗಿರಲಿದೆ ಎಂದು ಎಲ್.ಶ್ರೀನಿವಾಸ್ ಮಾಹಿತಿ ಹೇಳಿದರು.

ಪ್ರತಿ ಮನೆಗೆ 20 ಸಾವಿರ ಲೀ ಉಚಿತ ನೀರು?

ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರ ಪಡೆಯುವ ಉದ್ದೇಶದಿಂದ ಆಡಳಿತ ಪಕ್ಷವು ನದೆಹಲಿ ಮಾದರಿಯಲ್ಲಿ ಪ್ರತಿ ಕುಟುಂಬಕ್ಕೂ ತಿಂಗಳಿಗೆ 20 ಸಾವಿರ ಲೀ. ನೀರನ್ನು ಉಚಿತವಾಗಿ ನೀಡುವ ಘೋಷಣೆ ಮಾಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ ಸುಮಾರು 7 ಲಕ್ಷ ಕುಟುಂಬಗಳು ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆದಿವೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 20 ಸಾವಿರ ಲೀಟರ್‌ ನೀರು ಪೂರೈಸಲು ಅಂದಾಜು ₹160 ವೆಚ್ಚವಾಗಲಿದೆ. ಅಂದರೆ ಈ ಯೋಜನೆ ಸಲುವಾಗಿ ತಿಂಗಳಿಗೆ ₹ 11 ಕೋಟಿ ವೆಚ್ಚವಾಗಲಿದೆ. ಈ ಮೊತ್ತವನ್ನು ಬಿಬಿಎಂಪಿ ಸ್ವಂತ ಹಣದಿಂದ ಭರಿಸುವುದೋ ಅಥವಾ ಸರ್ಕಾರದ ಮೊರೆ ಹೋಗುವುದೋ ಎಂದು ಕಾದು ನೋಡಬೇಕಿದೆ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಗರದ ಘೋಷಿತ ಕೊಳೆಗೇರಿಗಳಿಗೆ ತಿಂಗಳಿಗೆ 10 ಸಾವಿರ ನೀರನ್ನು ಉಚಿತವಾಗಿ ಪೂರೈಸುವ ಕಾರ್ಯಕ್ರಮ ಜಾರಿಗೆ ತರಲಾಗಿತ್ತು.

ಆಸ್ತಿ ತೆರಿಗೆ ಪಾವತಿಸಿದವರಿಗೆ ಶೇ 5ರಷ್ಟು ರಿಯಾಯಿತಿ ನೀಡುವುದನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ಸ್ಥಾಯಿ ಸಮಿತಿ ಅಧ್ಯಕ್ಷರು ಈ ಕೆಲವು ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ.

* ಕೊರೊನಾ ಸೋಂಕು ಎದುರಿಸಲು ಪ್ರತಿ ವಾರ್ಡ್‌ ಗೆ ₹25 ಲಕ್ಷದಂತೆ 198 ವಾರ್ಡ್‌ ಗಳಿಗೆ ₹49 ಕೋಟಿ ಮೊತ್ತದಲ್ಲಿ ಶ್ರಮಿಕರಿಗೆ ಸಹಾಯಧನ, ದಿನಸಿ ವಿತರಣೆಗೆ ಒತ್ತು

* ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು

* ಪೌರ ಕಾರ್ಮಿಕರಿಗೆ ಸೂರುಭಾಗ್ಯ; ಪ್ರಾರಂಭಿಕ ಹಂತದಲ್ಲಿ ₹10 ಕೋಟಿ

* ಬೆಂಗಳೂರಿನ 8 ಕಡೆ ಸ್ವಾಗತ ಕಮಾನು

* ಕೊರೊನಾ ಚಿಕಿತ್ಸೆಗೂ ಪೂರಕವಾಗುವಂತೆ ವ್ಯವಸ್ಥೆ

* ದೀನದಯಾಳ್ ಉಪಾದ್ಯಯ ಹೆಸರಿನಲ್ಲಿ ಮಕ್ಕಳ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ

* ಅನಂತಕುಮಾರ್ ಹೆಸರಿನಲ್ಲಿ ಪ್ರತಿ ವಾರ್ಡ್‌ನ 15 ಮಕ್ಕಳಿಗೆ ಉಚಿತ ಲ್ಯಾಪ್‌ಟ್ಯಾಪ್

* ಶಾಲಾ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ

* ಬಿಬಿಎಂಪಿ ಶಾಲೆಗಳಲ್ಲಿ ‘ಸ್ಮಾರ್ಟ್’ ಶಿಕ್ಷಣ

* ಎಸ್ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ₹25 ಸಾವಿರ ಪ್ರೋತ್ಸಾಹ ಧನ

* ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ₹30 ಸಾವಿರ ಪ್ರೋತ್ಸಾಹ ಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.