ADVERTISEMENT

ನಿಯಮ ಮೀರಿ ಫ್ಲ್ಯಾಟ್‌ ನಿರ್ಮಾಣ

ಅನುಮೋದಿತ ಯೋಜನೆ ನಕ್ಷೆ ತಿದ್ದಿ ಮಾರಾಟಕ್ಕೆ ಯತ್ನ : 4ಕ್ಕೆ ಅನುಮತಿ, ನಿರ್ಮಿಸಿದ್ದು 12

ಪ್ರವೀಣ ಕುಮಾರ್ ಪಿ.ವಿ.
Published 10 ಮಾರ್ಚ್ 2020, 22:24 IST
Last Updated 10 ಮಾರ್ಚ್ 2020, 22:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಮನೆ ಖರೀದಿಸುತ್ತಿದ್ದೀರಾ. ಹಾಗಾದರೆ, ಆ ಕಟ್ಟಡವನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಕ್ಷೆ ಪ್ರಕಾರವೇ ಕಟ್ಟಲಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆ ಇದೆ.

ಬೊಮ್ಮನಹಳ್ಳಿ ವಲಯದ ಪುಟ್ಟೇನಹಳ್ಳಿ ವಾರ್ಡ್‌ನಲ್ಲಿ ಅನುಮೋದನೆ ಪಡೆದ ನಕ್ಷೆ ಪ್ರಕಾರ ಕಟ್ಟಡ ನಿರ್ಮಿಸಲಿಲ್ಲ ಎಂಬ ಕಾರಣಕ್ಕೆ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದನ್ನು ಕೆಡವಲು ಬಿಬಿಎಂಪಿ ಮುಂದಾದ ಬಳಿಕ ಪಶ್ಚಿಮ ವಲಯದ ಮಲ್ಲೇಶ್ವರ ವಾರ್ಡ್‌ನಲ್ಲೂ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.

ಕಟ್ಟಡ ಮಾಲೀಕರು ನಾಲ್ಕು ಅಡುಗೆ ಕೋಣೆಗಳಿರುವ (ನಾಲ್ಕು ಫ್ಲ್ಯಾಟ್‌) ಕಟ್ಟಡ ನಿರ್ಮಿಸಲು ಬಿಬಿಎಂಪಿಯಿಂದ ಅನುಮತಿ ಪಡೆದು 12 ಅಡುಗೆಕೋಣೆಗಳಿರುವ ಕಟ್ಟಡ ನಿರ್ಮಿಸಿದ ಬಗ್ಗೆ ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಸಂಘಟನೆಯ ಸದಸ್ಯರೊಬ್ಬರು ಬಿಬಿಎಂಪಿಯ ಗಮನ ಸೆಳೆದಿದ್ದಾರೆ.

ADVERTISEMENT

ಮಲ್ಲೇಶ್ವರ ವಾರ್ಡ್‌ನಲ್ಲಿರುವ ಸ್ವತ್ತು ಸಂಖ್ಯೆ 7–25–13ರಲ್ಲಿ ಮೂರು ಮಹಡಿಗಳನ್ನು (ನಾಲ್ಕು ಫ್ಲ್ಯಾಟ್‌ಗಳು) ಹೊಂದಿರುವ ಕಟ್ಟಡ ನಿರ್ಮಾಣ ಯೋಜನೆಗೆ ಬಿಬಿಎಂಪಿ ಪಶ್ಚಿಮ ವಲಯದ ಯೋಜನಾ ಘಟಕದ ಸಹಾಯಕ ನಿರ್ದೇಶಕರು ಅನುಮೋದನೆ ನೀಡಿದ್ದರು. ಆದರೆ, ಆ ಸ್ವತ್ತಿನಲ್ಲಿ 12 ಫ್ಲ್ಯಾಟ್‌ಗಳಿರುವ ಕಟ್ಟಡ ನಿರ್ಮಿಸಲಾಗಿದೆ. ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ವಿ.ಎನ್‌.ರಾಮಸ್ವಾಮಿ ಅವರು ಪಾಲಿಕೆಯಿಂದ ಮಾಹಿತಿ ಹಕ್ಕಿನಡಿ ಪಡೆದಿರುವ ದಾಖಲೆಗಳಲ್ಲಿ ಈ ಉಲ್ಲಂಘನೆ ಬಹಿರಂಗವಾಗಿದೆ.

‘ಈ ಕಟ್ಟಡದ ಮುಂದಿನ ರಸ್ತೆ ಕೇವಲ 8.3 ಮೀಟರ್ ಅಗಲವಿದೆ. ನಾಲ್ಕು ಮಹಡಿಗಳ ಕಟ್ಟಡಕ್ಕೆ ಅನುಮೋದನೆ ನೀಡಲು ಸಾಧ್ಯವೇ ಇಲ್ಲ. ಕಟ್ಟಡ ಮಾರಾಟ ಮಾಡುವಾಗ 12 ಫ್ಲ್ಯಾಟ್‌ ನಿರ್ಮಾಣಕ್ಕೆ ಅನುಮೋದನೆ ಪಡೆದಿರುವ ದಾಖಲೆಯನ್ನು ಮಾಲೀಕರು ತೋರಿಸುತ್ತಿದ್ದರು. ಇದರಲ್ಲಿ ಏನೋ ಅವ್ಯವಹಾರ ನಡೆದಿದೆ ಎಂಬ ಶಂಕೆಯಿಂದ ನಾನು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದೆ. ಆಗ ಕಟ್ಟಡ ಯೋಜನೆಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವುದು ಕಂಡು ಬಂತು’ ಎಂದು ರಾಮಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲು ಬಿಲ್ಡರ್‌ ಯತ್ನಿಸುತ್ತಿದ್ದಾರೆ. ಕಟ್ಟಡ ಯೋಜನೆಗೆ ಅನುಮೋದನೆ ಪಡೆದ ನಕ್ಷೆಯನ್ನು ತಿದ್ದುವ ಮೂಲಕ ನೆಲಮಹಡಿ ಸೇರಿದಂತೆ ನಾಲ್ಕು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ (ಒಟ್ಟು 12 ಫ್ಲ್ಯಾಟ್‌ಗಳು) ಅನುಮೋದನೆ ಪಡೆದಿರುವಂತೆ ತೋರಿಸಿದ್ದಾರೆ’ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಟ್ಟಡದ ಮಾಲೀಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.

‘ದೂರು ನೀಡಿದರೂ ಕ್ರಮವಿಲ್ಲ’
‘ಈ ಅಕ್ರಮದ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ, ಬಿಬಿಎಂಪಿ ಆಯುಕ್ತರಿಗೆ ಹಾಗೂ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ 2019ರ ನವೆಂಬರ್‌ನಲ್ಲಿದಾಖಲೆ ಸಮೇತ ದೂರು ನೀಡಿದ್ದೆ. ಜಂಟಿ ಆಯುಕ್ತರನ್ನು ಭೇಟಿ ಮಾಡಿ ಈ ಅಕ್ರಮದ ಬಗ್ಗೆ ವಿವರಿಸಿದ್ದೇನೆ. ಇದಾಗಿ ಮೂರು ತಿಂಗಳು ಕಳೆದರೂ ಯಾವುದೇ ಕ್ರಮ ಆಗಿಲ್ಲ’ ಎಂದು ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಪಾಲಿಕೆ ಅಧಿಕಾರಿಗಳ ಸಹಕಾರ ಇಲ್ಲದೇ ಈ ರೀತಿ ಉಲ್ಲಂಘನೆ ಸಾಧ್ಯವಿಲ್ಲ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್‌, ‘ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

**
273 ಕಟ್ಟಡಗಳಿಗೆ ನೋಟಿಸ್
ಬೆಂಗಳೂರು:
‘ನಗರದಲ್ಲಿ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸದ, 15 ಮೀಟರ್‌ಗಿಂತ ಎತ್ತರದ 273 ಕಟ್ಟಡಗಳಿಗೆ ನೋಟಿಸ್‌ ನೀಡಲಾಗಿದೆ. 141 ಆಸ್ಪತ್ರೆಗಳು, 65 ಪಬ್‌ ಮತ್ತು ಬಾರ್‌ಗಳು ಇವುಗಳಲ್ಲಿ ಸೇರಿವೆ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು.

ಬಾಗೇಪಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಪ್ರಶ್ನೆಗೆ ಮಂಗಳವಾರ ಲಿಖಿತ ಉತ್ತರ ನೀಡಿರುವ ಸಚಿವರು, ‘ಇಂದಿರಾನಗರದ ಪ್ರದೇಶದಲ್ಲಿ 14 ಕಟ್ಟಡಗಳಿಗೆ ಹಾಗೂ ಮಾರತಹಳ್ಳಿ ವ್ಯಾಪ್ತಿಯಲ್ಲಿ 53 ಪಿ.ಜಿ. ಕಟ್ಟಡಗಳಿಗೆ ನೋಟಿಸ್‌ ನೀಡಲಾಗಿದೆ. ಅಗ್ನಿ ಸುರಕ್ಷತೆ ಮಾನದಂಡಗಳನ್ನು ಪಾಲಿಸುವಂತೆ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಕಟ್ಟಡ ಮಾಲೀಕರಿಗೆ ನೀಡಿರುವ ಸೂಚನಾಪತ್ರದಲ್ಲಿ ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.