ADVERTISEMENT

ಬಿಬಿಎಂಪಿ ರೂಪಿಸಿದ್ದ ಬೈಲಾವನ್ನೇ ಅನುಮೋದಿಸಿ

ಜಾಹೀರಾತು ನಿಯಮ: ಸರ್ಕಾರಕ್ಕೆ ಮೇಯರ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 20:15 IST
Last Updated 8 ಆಗಸ್ಟ್ 2019, 20:15 IST
   

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ಜಾಹೀರಾತು ನಿಯಮ 2019ರ ಜಾರಿಯ ಬದಲು ಬಿಬಿಎಂಪಿ 2018ರಲ್ಲಿ ರೂಪಿಸಿದ್ದ ಜಾಹೀರಾತು ಬೈಲಾಕ್ಕೆ ಅನುಮೋದನೆ ನೀಡಬೇಕು ಎಂದು ಮೇಯರ್ ಗಂಗಾಂಬಿಕೆ ಅವರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಗುರುವಾರ ಪತ್ರ ಬರೆದಿದ್ದಾರೆ.

ನಗರದಲ್ಲಿ ಚಾಲ್ತಿಯಲ್ಲಿದ್ದ ‘ಬಿಬಿಎಂಪಿ ಜಾಹೀರಾತು ಬೈಲಾ– 2006’ರಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಸಲುವಾಗಿ ಪಾಲಿಕೆ 2018ರಲ್ಲಿ ಪರಿಷ್ಕೃತ ಬೈಲಾವನ್ನು ರೂಪಿಸಿತ್ತು. ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡ ಈ ಬೈಲಾವನ್ನು ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿತ್ತು. ಇಲಾಖೆ ಅದಕ್ಕೆ ಅನುಮೋದನೆ ನೀಡುವ ಬದಲು ‘ಬಿಬಿಎಂಪಿ ಜಾಹೀರಾತು ನಿಯಮಗಳು–2019’ ಅನ್ನು ರೂಪಿಸಿತ್ತು. ಈ ಬಗ್ಗೆ ಜು.22ರಂದು ಅಧಿಸೂಚನೆಯನ್ನೂ ಹೊರಡಿಸಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಪಾಲಿಕೆಗೆ 15 ದಿನಗಳ ಕಾಲಾವಕಾಶ ನೀಡಿತ್ತು.

ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಮೇಯರ್, ‘1976ರ ಕೆಎಂಸಿ ಕಾಯ್ದೆ ಪ್ರಕಾರ ಜಾಹೀರಾತು ಫಲಕಗಳನ್ನು ಅಳವಡಿಸುವ ಕಟ್ಟಡ ಸ್ವಾಧೀನಾನುಭವ ಪತ್ರ ಪಡೆದಿರುವುದು ಕಡ್ಡಾಯ. ಆದರೆ, ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ನಿಯಮಗಳಲ್ಲಿ ಇದರ ಉ್ಲಲೇಖವೇ ಇಲ್ಲ. ಇದು ಕೆಎಂಸಿ ಕಾಯ್ದೆಗೆ ವಿರುದ್ಧವಾಗಿದೆ. ಅಲ್ಲದೇ, 2006ರ ಬೈಲಾದಲ್ಲಿ ನಿಗದಿಪಡಿಸಿದ್ದಕ್ಕಿಂತ ಕಡಿಮೆಪ್ರಮಾಣದ ಶುಲ್ಕದ ನಿಗದಿ ಮಾಡಲಾಗಿದೆ. ಇದು ಪಾಲಿಕೆಗೆ ಆರ್ಥಿಕವಾಗಿ ಹಾನಿಯುಂಟು ಮಾಡಲಿದೆ’ ಎಂದು ಗಮನ ಸೆಳೆದಿದ್ದಾರೆ.

ADVERTISEMENT

‘ಸಾರ್ವಜನಿಕರ ಹಿತದೃಷ್ಟಿಯಿಂದ ಹೋರ್ಡಿಂಗ್‌ಗಳನ್ನು ನಿಷೇಧಿಸುವಂತೆ ಪಾಲಿಕೆ ನಿರ್ಣಯ ತೆಗೆದುಕೊಂಡಿದ್ದರೂ, ಹೊಸ ನಿಯಮಗಳಲ್ಲಿ ಹೋರ್ಡಿಂಗ್ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಸಂಚಾರ ಸುರಕ್ಷತೆಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ನಿರ್ಲಕ್ಷಿಸಲಾಗಿದೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.