
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂದಾಯ ನಿವೇಶನಗಳು ಸೇರಿದಂತೆ ಭೂ ಪರಿವರ್ತನೆಯಾಗದೆ, ಯಾವುದೇ ಶುಲ್ಕ ಪಾವತಿಸದೆ ನಿಯಮಬಾಹಿರವಾಗಿ ಪಡೆದಿರುವ ಆಸ್ತಿಗಳ ‘ಎ’ ಖಾತೆಗಳು ರದ್ದಾಗಲಿವೆ.
ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ, ಯಲಹಂಕ, ಪಶ್ಚಿಮ ವಲಯದಲ್ಲಿ ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆಯಾಗಿರುವ ಎಲ್ಲ ಖಾತೆಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತರು ‘ಪರಿಶೀಲನಾ ಸಮಿತಿ’ ರಚಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ ದೊಡ್ಡದಾಗಿ 110 ಹಳ್ಳಿಗಳೂ ಸೇರಿಕೊಂಡ ಮೇಲೆ, ನಗರದಲ್ಲಿ ಕಂದಾಯ ಹಾಗೂ ಭೂ ಪರಿವರ್ತನೆಯಾಗದ ಬಡಾವಣೆಗಳಲ್ಲಿ ಲಕ್ಷಾಂತರ ನಿವೇಶನಗಳಿವೆ. ಇಂತಹ ಪ್ರಕರಣಗಳಲ್ಲಿನ ನಿವೇಶನಗಳಿಗೆ ಬಿಬಿಎಂಪಿ ಅಥವಾ ಬಿಡಿಎ ಈಗಾಗಲೇ ರಸ್ತೆ, ಚರಂಡಿಯಂತಹ ಮೂಲಸೌಕರ್ಯವನ್ನು ಒದಗಿಸಿವೆ. ಇವುಗಳ ಭೂ ಪರಿವರ್ತನೆಗೂ ಅವಕಾಶ ಇರಲಿಲ್ಲ. ಭೂ ಪರಿವರ್ತನೆಯಾಗದ ನಿವೇಶನಗಳಿಗೆ ಖಾತೆ ನೀಡುವುದಿಲ್ಲ. ಈ ನಿವೇಶನಗಳೆಲ್ಲ ಅಕ್ರಮ–ಸಕ್ರಮ ಯೋಜನೆಯಡಿ ಸಕ್ರಮವಾಗುವ ಅವಕಾಶವಿದೆ. ಆದರೆ, ಆ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ವಿಚಾರಣೆ ಹಂತದಲ್ಲಿವೆ. ಹೀಗಾಗಿ, ನಿವೇಶನಗಳನ್ನು ‘ಬಿ’ ರಿಜಿಸ್ಟ್ರಾರ್‌ನಲ್ಲಿ ನಮೂದಿಸಿಕೊಂಡು ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹಿಸುತ್ತಿದೆ.
‘ಬಿ’ ರಿಜಿಸ್ಟ್ರಾರ್‌ನಲ್ಲಿರುವ ಯಾವ ನಿವೇಶನಗಳನ್ನೂ ‘ಎ’ ಖಾತೆಯಾಗಿ ಪರಿವರ್ತಿಸುವ ಯೋಜನೆ ಅಥವಾ ಪ್ರಕಟಣೆಯನ್ನು ಬಿಬಿಎಂಪಿ ನೀಡಿರಲಿಲ್ಲ. ಹೀಗಿದ್ದರೂ, ಲಕ್ಷಾಂತರ ಪ್ರಕರಣಗಳಲ್ಲಿ ‘ಎ’ ಖಾತೆ ನೀಡಲಾಗಿದೆ. ಇವೆಲ್ಲ ಕಾನೂನುಬಾಹಿರವಾಗಿದ್ದು ಅವುಗಳನ್ನೆಲ್ಲ ರದ್ದುಪಡಿಸಲು ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಜನರು ಅಕ್ರಮ–ಸಕ್ರಮ ಯೋಜನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ‘ಬಿ’ ರಿಜಿಸ್ಟ್ರಾರ್‌ನಲ್ಲಿದ್ದ ನಿವೇಶನಗಳಿಗೆ ಹೆಚ್ಚಿನ ಮೌಲ್ಯ ಬರಲು, ಬ್ಯಾಂಕ್‌ನಲ್ಲಿ ಸಾಲ ಪಡೆಯಲು ‘ಎ’ ಖಾತೆ ಪಡೆಯಲು ಮುಂದಾಗಿದ್ದರು. ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಇಂತಹ ನಿವೇಶನಗಳಿಗೆ ‘ಎ’ ಖಾತೆ ನೀಡಿದ್ದಾರೆ. ಇದಕ್ಕಾಗಿ ಜನ ಸಾಕಷ್ಟು ಹಣವನ್ನೂ ನೀಡಿದ್ದಾರೆ. ಆದರೆ ಅದ್ಯಾವುದಕ್ಕೂ ರಸೀದಿ ಇಲ್ಲ. ಆಸ್ತಿ ತೆರಿಗೆ ಮಾತ್ರ ‘ಎ’ ಖಾತೆಗೆ ಅನ್ವಯವಾಗುವಂತೆ ಪಾವತಿಸುತ್ತಿದ್ದಾರೆ. ಆದರೆ, ಇದೀಗ ಆ ಖಾತೆಯೇ ರದ್ದಾಗಲಿದೆ.
ಪರಿಶೀಲನಾ ಸಮಿತಿ: ಬಿಬಿಎಂಪಿಯ ಹಣಕಾಸು ವಿಭಾಗದ ಆಯುಕ್ತ ಜಯರಾಂ ರಾಯ್‌ಪುರ– ಅಧ್ಯಕ್ಷ, ಕಂದಾಯ ವಿಭಾಗದ ವಿಶೇಷ ಆಯುಕ್ತ ಆರ್.ಎಲ್. ದೀಪಕ್, ಆಡಳಿತ ವಿಭಾಗದ ವಿಶೇಷ ಆಯುಕ್ತ ಹರೀಶ್‌ಕುಮಾರ್– ಸದಸ್ಯರು, ಹಣಕಾಸು ವಿಭಾಗದ ಹೆಚ್ಚುವರಿ ಆಯುಕ್ತ– ಸದಸ್ಯ ಕಾರ್ಯದರ್ಶಿ.
ಸಿಬ್ಬಂದಿ ಮೇಲೆ ಕಠಿಣ ಕ್ರಮ: ಜಯರಾಂ
‘ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಬಿ’ ರಿಜಿಸ್ಟ್ರಾರ್‌ನಲ್ಲಿ (ಬಿ ಖಾತೆ) ಇರಬೇಕಾದ ನಿವೇಶನಗಳಿಗೆ ‘ಎ’ ಖಾತೆ ನೀಡಿರುವ ಬಿಬಿಎಂಪಿ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪಾಲಿಕೆಯ ಸಿಬ್ಬಂದಿ ಹಣ ಪಡೆದು ‘ಎ’ ಖಾತೆ ಮಾಡಿಕೊಟ್ಟಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸರ್ಕಾರಕ್ಕೆ ಶುಲ್ಕ ಅಥವಾ ಬಿಡಿಎ–ಬಿಬಿಎಂಪಿಗೆ ಅಭಿವೃದ್ಧಿ ಶುಲ್ಕವನ್ನೂ ಪಾವತಿಸಿಲ್ಲ. ಇದಕ್ಕೆ ಸದ್ಯ ಅವಕಾಶವೂ ಇಲ್ಲ. ‘ಬಿ’ ರಿಜಿಸ್ಟ್ರಾರ್‌ನಲ್ಲೇ ಇರಬೇಕು. ಇಂತಹ ನಿವೇಶನಗಳಿಗೆ ‘ಎ’ ಖಾತೆ ನೀಡಲಾಗಿದೆ. ಈ ಬಗ್ಗೆ ಒಂದು ತಿಂಗಳಲ್ಲಿ ತನಿಖೆ ನಡೆಸಿ, ಕಾರಣರಾದ ಎಲ್ಲ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರೂ ಆಗಿರುವ ಪರಿಶೀಲನಾ ಸಮಿತಿ ಅಧ್ಯಕ್ಷ ಜಯರಾಂ ರಾಯ್‌ಪುರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.