ADVERTISEMENT

ಕಮಿಷನ್‌ ದಾಖಲೆ ನೀಡಿದರೆ ಕಠಿಣ ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 19:20 IST
Last Updated 25 ಆಗಸ್ಟ್ 2022, 19:20 IST

ಬೆಂಗಳೂರು: ‘ಬಿಬಿಎಂಪಿಯಲ್ಲಿ ನಿರ್ವಹಿಸಿರುವ ಕಾಮಗಾರಿಗೆ ಬಿಲ್‌ ಹಣ ಬಿಡುಗಡೆ ಮಾಡುವಾಗ ಯಾರಿಗೆ ಕಮಿಷನ್‌ ನೀಡಲಾಗಿದೆ ಎಂಬುದರ ದಾಖಲೆ ನೀಡಿದರೆ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ತಿಳಿಸಿದರು.

‘ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದವರು ಮನವಿ ನೀಡಿದ್ದಾರೆ. ಆದರೆ ಕಮಿಷನ್‌ ಶೇ 40ರಿಂದ 50ಕ್ಕೆ ಹೆಚ್ಚಾಗುತ್ತಿದೆ ಎಂದಿದ್ದಾರೆ. ಯಾವ ಟೇಬಲ್‌ಗೆ ಎಷ್ಟು ಕಮಿಷನ್‌ ನೀಡಿದ್ದಾರೆ ಎಂಬುದನ್ನು ಲಿಖಿತವಾಗಿ ನೀಡಿದರೆ ನಾವು ಅವರ ಮೇಲೆ ಕ್ರಮ ಕೈಗೊಳ್ಳಬಹುದು. ಸುಮ್ಮನೆ ಕಮಿಷನ್‌ ನೀಡಬೇಕು, ಹೆಚ್ಚಾಗುತ್ತದೆ ಎಂದು ಹೇಳಿದರೆ ಆಗುವುದಿಲ್ಲ’ ಎಂದು ಹೇಳಿದರು.

‘ಗುತ್ತಿಗೆದಾರರ ಸಂಘ ನೀಡಿರುವ ಮನವಿಗೂ ಹೊಸ ಆದೇಶಗಳಿಗೂ ಸಂಬಂಧ ಇಲ್ಲ. ಅವರ ಬಿಲ್‌ಗಳು 22 ತಿಂಗಳಷ್ಟು ಹಳೆಯವು. ನಾನು ಈಗ ಮಾಡಿರುವ ಆದೇಶ ಆ.4ರಿಂದ ಜಾರಿಯಲ್ಲಿದೆ. ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ. ಮೊದಲಿನಂತೆ ಕೇಂದ್ರ ಕಚೇರಿಯಲ್ಲಿ ಬಿಲ್‌ ಹಣ ಪಾವತಿಯಾಗುವುದಿಲ್ಲ. ವಲಯ ಆಯುಕ್ತರು ಆಯಾ ವ್ಯಾಪ್ತಿಯ ಕಾಮಗಾರಿಗಳ ಬಿಲ್‌ಗಳನ್ನು ಪಾವತಿ ಮಾಡುತ್ತಾರೆ. ಇದಲ್ಲದೆ, ಟಿವಿಸಿಸಿ ಹಾಗೂ ಗುಣಮಟ್ಟ ನಿಯಂತ್ರಣ ಕೋಶಕ್ಕೆ ಸಿಬ್ಬಂದಿ ನೀಡಿ, ಅವರು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ ಅಷ್ಟೆ. ಇದರಿಂದ ಟೇಬಲ್‌ಗಳೇನೂ ಹೆಚ್ಚಾಗುವುದಿಲ್ಲ’ ಎಂದರು.

ADVERTISEMENT

‘ಗುತ್ತಿಗೆದಾರರ ಸಂಘದವರನ್ನು ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕರೆದು ಚರ್ಚೆ ಮಾಡಲಾಗುತ್ತದೆ. ಅವರು ಎಷ್ಟು ಕಮಿಷನ್‌ ನೀಡಿದ್ದಾರೆ, ಯಾವ ಟೇಬಲ್‌ಗೆ ನೀಡಿದ್ದಾರೆ ಎಂಬುದರ ಮಾಹಿತಿ ನೀಡಲಿ. ಆಗ ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನಾವು ನಿರ್ಧರಿಸುತ್ತೇವೆ. ಕಠಿಣ ಕ್ರಮವನ್ನೇ ಕೈಗೊಳ್ಳುತ್ತೇವೆ’ ಎಂದು ತುಷಾರ್‌ ಗಿರಿನಾಥ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.