ADVERTISEMENT

ಬಿಬಿಎಂಪಿ ಭೋಗ್ಯ ಆಸ್ತಿ ವಶಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 16:25 IST
Last Updated 9 ಜುಲೈ 2021, 16:25 IST
ಗೌರವ್ ಗುಪ್ತ
ಗೌರವ್ ಗುಪ್ತ   

ಬೆಂಗಳೂರು: ‘ನಗರದಲ್ಲಿ ಭೋಗ್ಯ ಪಡೆದಿರುವ ಬಿಬಿಎಂಪಿ ಆಸ್ತಿಗಳನ್ನು ಅಡವಿಟ್ಟು ಬ್ಯಾಂಕ್‌ನಿಂದ ಸಾಲ ಪಡೆದಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಭೋಗ್ಯ ಅವಧಿ ಮೀರಿರುವ ಆಸ್ತಿಗಳನ್ನು ಕೂಡಲೇ ವಶಕ್ಕೆ ಪಡೆಯಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಬಿಬಿಎಂಪಿಗೆ ಹಲವು ಕಡೆ ಕಟ್ಟಡಗಳು, ಜಮೀನುಗಳ ಅವಶ್ಯಕತೆ ಇದೆ. ಸಾರ್ವಜನಿಕ ಉದ್ದೇಶಕ್ಕೆ ಇವುಗಳನ್ನು ವಶಕ್ಕೆ ಪಡೆಯುವ ಅವಶ್ಯಕತೆ ಇದೆ’ ಎಂದು ಅವರು ಹೇಳಿದರು.

ಬಿಬಿಎಂಪಿಯ 116 ಆಸ್ತಿಗಳ ಭೋಗ್ಯ ಅವಧಿ ಮುಕ್ತಾಯವಾಗಿದೆ.

ADVERTISEMENT

ಎಚ್ಚರ ತಪ್ಪಿದರೆ ಅಪಾಯ:‘ಆರ್ಥಿಕ ಚಟುವಟಿಕೆಗಳು ನಡೆಯಲಿ ಎಂಬ ಉದ್ದೇಶದಿಂದ ಅನ್‌ಲಾಕ್ ಮಾಡಲಾಗಿದೆ. ಆದರೆ, ಸಾರ್ವಜನಿಕರು ಅನವಶ್ಯಕವಾಗಿ ಹೊರಗಡೆ ಓಡಾಡಿದರೆ ನಗರದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಅಪಾಯವಿದೆ’ ಎಂದು ಗೌರವ್ ಗುಪ್ತ ಎಚ್ಚರಿಸಿದರು.

‘ನಗರದಲ್ಲಿ ನಿತ್ಯ 500ರಿಂದ 600 ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲಿಯೂ ಮಹದೇವಪುರ ಮತ್ತು ಪೂರ್ವ ವಲಯಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ಸ್ಥಳಗಳನ್ನು ಕಂಟೈನ್‌ಮೆಂಟ್‌ ವಲಯ ಎಂದು ವಿಂಗಡಿಸಿ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಕೋವಿಡ್ ಪರೀಕ್ಷೆ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮೂಲಕ ಕೋವಿಡ್‌ ಚಿಕಿತ್ಸೆ ಪಡೆದ ಬಿಪಿಎಲ್‌ ಕುಟುಂಬದ ಸದಸ್ಯರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.