ADVERTISEMENT

ಖಾಲಿ ಜಾಗದಲ್ಲಿ ಕಸ ಹಾಕದಂತೆ ತಡೆಯಲು BBMP ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 16:00 IST
Last Updated 1 ಜುಲೈ 2025, 16:00 IST
ವಾಹನಗಳಿಗೆ ತಾಗುವ ಮರದ ರೆಂಬೆಗಳನ್ನು ತೆರವುಗೊಳಿಸಲು ಮಹೇಶ್ವರ್‌ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು
ವಾಹನಗಳಿಗೆ ತಾಗುವ ಮರದ ರೆಂಬೆಗಳನ್ನು ತೆರವುಗೊಳಿಸಲು ಮಹೇಶ್ವರ್‌ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು   

ಬೆಂಗಳೂರು: ಖಾಲಿ ಜಾಗಗಳಲ್ಲಿ ಕಸ ಬಿಸಾಡುವುದನ್ನು ತಡೆಯಲು ವಲಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.

ದಾಸರಹಳ್ಳಿ ವಲಯದ ಹೆಸರಘಟ್ಟ ಮುಖ್ಯರಸ್ತೆ– ಸಪ್ತಗಿರಿ ಮೆಡಿಕಲ್ ಕಾಲೇಜಿನಿಂದ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಕಸ ಬಿಸಾಡುವುದರಿಂದ ಬ್ಲ್ಯಾಕ್‌ಸ್ಪಾಟ್‌ಗಳು ನಿರ್ಮಾಣವಾಗುತ್ತಿವೆ. ಅದನ್ನು ನಿಯಂತ್ರಿಸಬೇಕು. ಹೆಸರಘಟ್ಟ ಮುಖ್ಯರಸ್ತೆ ವಿಸ್ತರಣೆಗಾಗಿ ಪಡೆದಿರುವ ಜಾಗವನ್ನು ಪಾಲಿಕೆ ವಶಪಡಿಸಿಕೊಂಡು ಕಾಮಗಾರಿಯನ್ನು ಶೀಘ್ರ ಮುಗಿಸಬೇಕು’ ಎಂದರು.

ADVERTISEMENT

ಹೆಸರುಘಟ್ಟ ರಸ್ತೆ ಕಿರ್ಲೋಸ್ಕರ್ ಜಂಕ್ಷನ್‌ನಲ್ಲಿ ವಾಹನಗಳು ಸರಾಗವಾಗಿ ಸಂಚರಿಸಲು ಅಡೆತಡೆಗಳನ್ನು ನಿವಾರಿಸಬೇಕು. ಕೃಷ್ಣ ಭವನ ಹೋಟೆಲ್ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲು ಸೂಚಿಸಿದರು.

ಕಿರ್ಲೋಸ್ಕರ್ ಲೇಔಟ್‌ನ ರಸ್ತೆಗಳಲ್ಲಿ ತುಂಬಾ ಕೆಳಭಾಗದಲ್ಲಿ, ವಾಹನಗಳಿಗೆ ತಾಗುವ ರೀತಿಯಲ್ಲಿರುವ ಮರಗಳ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಬೇಕು. ಜೊತೆಗೆ ಅಪಾಯಕಾರಿಯಾದ ಮತ್ತು ಒಣಗಿರುವ ಮರಗಳನ್ನು ತೆರವುಗೊಳಿಸಿ ಹೊಸದಾಗಿ ಸಸಿಗಳನ್ನು ನೆಡಬೇಕು ಎಂದರು.

‘ರಸ್ತೆ ಬದಿ ಸೋಫಾ, ಕುರ್ಚಿ, ಪೀಠೋಪಕರಣಗಳು, ಬಟ್ಟೆ, ದಿಂಬು, ಹಾಸಿಗೆ, ಶೌಚಾಲಯದ ಟೈಲ್ಸ್, ಕಮೋಡ್‌ಗಳು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಬಿಸಾಡಿದ್ದು, ಅದನ್ನು ಒಣತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಪುನರ್ ಬಳಕೆ ಮಾಡಬೇಕು. ಇಂತಹ ತ್ಯಾಜ್ಯವನ್ನು ಸಾರ್ವಜನಿಕರೇ  ಘಟಕಕ್ಕೆ ತಂದುಕೊಡುವ ವ್ಯವಸ್ಥೆ ನಿರ್ಮಿಸಬೇಕು. ಆಸಕ್ತ ಹಿರಿಯ ನಾಗರಿಕರು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಹೆಸರುಘಟ್ಟ ಮುಖ್ಯರಸ್ತೆ ಸಪ್ತಗಿರಿ ಮೆಡಿಕಲ್ ಕಾಲೇಜಿನಿಂದ ತುಮಕೂರು ರಸ್ತೆ ಕಡೆಗೆ, ಕಿರ್ಲೋಸ್ಕರ್ ಲೇಔಟ್, ನೇವಿ ಲೇಔಟ್‌ವರೆಗೆ 2.5 ಕಿ.ಮೀ ನಡೆದ ಮಹೇಶ್ವರ್‌ ರಾವ್, ಹಲವು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.

ವಲಯ ಆಯುಕ್ತ ನವೀನ್ ಕುಮಾರ್ ರಾಜು, ಮುಖ್ಯ ಎಂಜಿನಿಯರ್‌ ಬಸವರಾಜ್ ಕಬಾಡೆ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.