ADVERTISEMENT

‘ನಾಗರಿಕರ ನೀರ ಹಾದಿ’ ಯೋಜನೆಗೆ ಅಸ್ತು

₹ 169 ಕೋಟಿ ವೆಚ್ಚದಲ್ಲಿ ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 20:41 IST
Last Updated 3 ಜನವರಿ 2021, 20:41 IST
ರಾಜಕಾಲುವೆ–ಸಾಂದರ್ಭಿಕ ಚಿತ್ರ
ರಾಜಕಾಲುವೆ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋರಮಂಗಲ ಕಣಿವೆಯ ರಾಜಕಾಲುವೆಯನ್ನು ₹ 169 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ‘ನಾಗರಿಕರ ನೀರ ಹಾದಿ’ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕೊಳಚೆ ನೀರು ಹರಿಯುವ ಜಾಲದ ಮರುಪರಿಶೀಲನೆ, ದುರಸ್ತಿ, ಮರುವಿನ್ಯಾಸ, ನಿರ್ಮಾಣ ತ್ಯಾಜ್ಯನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ರಚನೆ ಮುಂತಾದ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತದೆ. ನಿರ್ಮಿಸಿ, ಬಳಸಿ ಹಸ್ತಾಂತರಿಸುವ (ಬಿಒಟಿ) ಕಾರ್ಯಕ್ರಮದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಕಾಮಗಾರಿಯ ಗುತ್ತಿಗೆ ಪಡೆದ ಸಂಸ್ಥೆಯೇ ಐದು ವರ್ಷಗಳ ಕಾಲ ಈ ಜಾಲದ ನಿರ್ವಹಣೆಯನ್ನೂ ನೋಡಿಕೊಳ್ಳಲಿದೆ.

ಕೆ.ಆರ್‌.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗಿನ ರಾಜಕಾಲುವೆಗೆ ಒಳಚರಂಡಿ ನೀರು ಹಾಗೂ ಕಸ ಸೇರಿಕೊಳ್ಳುತ್ತಿದೆ. ಈ ರಾಜಕಾಲುವೆಯಲ್ಲಿ ಮಳೆ ನೀರಿನ ಬದಲು ಮಲಿನ ನೀರು ಹರಿಯುತ್ತಿದೆ. ಈ ರಾಜಕಾಲುವೆಗೆ ಒಳಚರಂಡಿಯ ಮಲಿನ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು. ಈ ಪ್ರದೇಶದ ಎಲ್ಲ ಕೈಗಾರಿಕೆಗಳು, ವಾಣಿಜ್ಯ ಘಟಕಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ಇತರ ಸಂಸ್ಥೆಗಳು, ಮನೆಗಳು ಯಾವುದೇ ಮಲಿನ ನೀರನ್ನು ಹೊರಸೂಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹಸಿರು ನ್ಯಾಯಮಂಡಳಿ 2018ರ ಡಿ. 6ರಂದು ಆದೇಶ ಮಾಡಿತ್ತು.

ADVERTISEMENT

ಕೆರೆ ಹಾಗೂ ರಾಜಕಾಲುವೆಗಳ ಸಂರಕ್ಷಣೆಗಾಗಿ ಹೈಕೋರ್ಟ್‌ ಆದೇಶದ ಮೇರೆಗೆ ರಚನೆಗೊಂಡ ಎನ್‌.ಕೆ.ಪಾಟೀಲ ನೇತೃತ್ವದ ಸಮಿತಿ 2011ರ ಫೆ 26ರಂದು ನೀಡಿದ್ದ ವರದಿಯಲ್ಲಿ, ‘ರಾಜಕಾಲುವೆಗಳಿಗೆ ಕಸ ಎಸೆಯಲು ಹಾಗೂ ಒಳಚರಂಡಿಯ ಕೊಳಚೆ ನೀರು ಸೇರಿಕೊಳ್ಳಲು ಅವಕಾಶ ನೀಡಬಾರದು. ಹೂಳು ತೆರವುಗೊಳಿಸಲು ಹಾಗೂ ಕಸವನ್ನು ಸೋಸಿ ಹೊರ ತೆಗೆಯಲು ಅಲ್ಲಲ್ಲಿ ಅಗತ್ಯ ವ್ಯವಸ್ಥೆಗಳನ್ನು ರೂಪಿಸಬೇಕು. ರಾಜಕಾಲುವೆಗಳು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಇವುಗಳನ್ನು ನಗರದ ಪರಿಸರ ವ್ಯವಸ್ಥೆ ಮರುರೂಪಿಸುವ ತಾಣಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಇವುಗಳ ಒತ್ತುವರಿ ತಡೆಯಲು ಕ್ರಮಕೈಗೊಳ್ಳಬೇಕು’ ಎಂದು ಶಿಫಾರಸು ಮಾಡಿತ್ತು.

ಹಸಿರು ನ್ಯಾಯಮಂಡಳಿ ಆದೇಶ ಹಾಗೂ ಎನ್‌.ಕೆ.ಪಾಟೀಲ ಸಮಿತಿಯ ಶಿಫಾರಸು ಅನುಷ್ಠಾನಕ್ಕೆ ಮುಂದಾದ ರಾಜ್ಯ ಸರ್ಕಾರ, 2020–21ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರಿನ ರಾಜಕಾಲುವೆ ಜಾಲದ ತಪ್ಪಿದ ಕೊಂಡಿಗಳನ್ನು ಸರಿಪಡಿಸಲು ಹಾಗೂ ಮಳೆಗಾಲದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗುವುದನ್ನು ತಪ್ಪಿಸಲು ಕಾರ್ಯಕ್ರಮ ಪ್ರಕಟಿಸಿತ್ತು. ಇದರ ಅನುಷ್ಠಾನಕ್ಕೆ ₹ 200 ಕೋಟಿ ಮೀಸಲಿಟ್ಟಿತ್ತು.

ರಾಜ್ಯ ಸರ್ಕಾರವು 2020–21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ₹ 200 ಕೋಟಿಗಳಲ್ಲಿ ₹ 50 ಕೋಟಿಯನ್ನು ಈ ಯೋಜನೆಯ ಪ್ರಾರಂಭಿಕ ಅನುದಾನ (ಟೋಕನ್‌ ಗ್ರ್ಯಾಂಟ್‌) ರೂಪದಲ್ಲಿ ಹಂಚಿಕೆ ಮಾಡಿದೆ. 2021–22 ಸಾಲಿನ ಬಜೆಟ್‌ನಲ್ಲಿ ₹ 119 ಕೋಟಿಯನ್ನು ಒದಗಿಸಲು ಅನುಮೋದನೆ ನೀಡಿದೆ. ಇದರ ನಿರ್ವಹಣೆಗೆ ತಗಲುವ ₹ 4.25 ಕೋಟಿಯನ್ನು ಬಿಬಿಎಂಪಿ ಅನುದಾನದಲ್ಲೇ ಬಳಸಬೇಕು ಎಂದು ಸರ್ಕಾರ ಹೇಳಿದೆ. ವಾರ್ಷಿಕ ನಿರ್ವಹಣೆ ವೆಚ್ಚವನ್ನು 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಪರಿಸರ ಸಂರಕ್ಷಣೆಗೆ ಮೀಸಲಿಟ್ಟ ಮೊತ್ತದಲ್ಲಿ ಬಳಸಲು ಬಿಬಿಎಂಪಿ ನಿರ್ಧರಿಸಿದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯಡಿ ಟೆಂಡರ್‌ ಕರೆದು ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ನೀರಿನ ಸಂಪನ್ಮೂಲದ ನಿರ್ವಹಣೆ ಸಂಬಂಧ ಹಸಿರು ನ್ಯಾಯಮಂಡಳಿಯ ಕಾಲಕಾಲಕ್ಕೆ ನೀಡಿರುವ ನಿರ್ದೇಶನಗಳನ್ನು ಈ ಯೋಜನೆ
ಅನುಷ್ಠಾನದ ವೇಳೆ ಪಾಲಿಸಬೇಕು. ಕಾಮಗಾರಿ ಕೈಗೆತ್ತಿಕೊಳ್ಳುವಾಗ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಹಾಗೂ ಅನುಮೋದನೆ ಪಡೆಯಬೇಕು. ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ರಾಜಕಾಲುವೆಯ ಭೌತಿಕ ಅಂಶಗಳಿಗೆ ಧಕ್ಕೆ ಉಂಟಾಗಬಾರದು. ಒತ್ತುವರಿಗಳನ್ನು ಕಾಮಗಾರಿಗೆ ಮುನ್ನವೇ ತೆರವುಗೊಳಿಸಬೇಕು ಎಂಬ ಷರತ್ತುಗಳನ್ನು ಸರ್ಕಾರ ವಿಧಿಸಿದೆ.

ಹಸಿರು ನ್ಯಾಯಮಂಡಳಿ ನಿರ್ದೇಶನ ಮೇರೆಗೆ ನ್ಯಾ.ಸಂತೋಷ್‌ ಹೆಗ್ಡೆ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಈ ಕಣಿವೆಯ ಸ್ಥಳ ಸಮೀಕ್ಷೆ ನಡೆಸಿತ್ತು. ಈ ರಾಜಕಾಲುವೆಯಲ್ಲಿ 2 ಕಿ.ಮೀ ದೂರದವರೆಗೆ ಒಳಚರಂಡಿ ಕೊಳವೆ ಹಾದು ಹೋಗಿದ್ದು, ಇದರಿಂದ ಸಮತಟ್ಟಾದ ಪ್ರದೇಶದಲ್ಲಿ ರಾಜಕಾಲುವೆಯಲ್ಲಿ ನೀರಿನ ಸಹಜ ಹರಿವಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಸಮಿತಿ ಹೇಳಿತ್ತು. ಇಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವಂತೆ ಸಮಿತಿ ಸಲಹೆ ನೀಡಿತ್ತು. ಈ ಅಂಶಗಳನ್ನು ಬಿಬಿಎಂಪಿ ಈ ಯೋಜನೆಯಲ್ಲಿ ಅಳವಡಿಸಿಕೊಂಡಿದೆ.

ಈ ರಾಜಕಾಲುವೆಗೆ ಒಳಚರಂಡಿಯ ಕೊಳಚೆ ನೀರು ಸೇರುವುದನ್ನು ತಡೆಯಬೇಕು. ವಸತಿ ಸಮುಚ್ಚಯಗಳ ಅಥವಾ ಬಡಾವಣೆಗಳಲ್ಲಿ ರಾಜಕಾಲುವೆ ನೀರು ಹರಿಯಬಿಡುವುದನ್ನು ಮುಚ್ಚಿದರೆ ಸಾಲದು. ಕೊಳಚೆ ನೀರು ನಿರ್ವಹಣೆಗೆ ಶಾಶ್ವತ ಪರಿಹಾರ ರೂಪಿಸಬೇಕು. ಕೆ.ಆರ್‌.ಮಾರುಕಟ್ಟೆ ಪ್ರದೇಶದಲ್ಲಿ ರಾಜಕಾಲುವೆಗೆ ಕಸ ಸುರಿಯಲಾಗುತ್ತಿದೆ. ಹಾಗಾಗಿ ಇಲ್ಲಿ ಹೂಳು ಸಂಗ್ರಹ ತಪ್ಪಿಸುವ ಟ್ರ್ಯಾಪ್‌ಗಳು ಕಟ್ಟಿಕೊಳ್ಳುತ್ತಿವೆ. ಇದನ್ನು ತಪ್ಪಿಸಬೇಕು. ಹೆಚ್ಚು ಮಳೆಯಾದಾಗ ರಾಜಕಾಲುವೆಯಲ್ಲಿ ಪ್ರವಾಹ ಉಂಟಾಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.

ಈ ರಾಜಕಾಲುವೆ ಅಭಿವೃದ್ಧಿ ಸಂದರ್ಭದಲ್ಲಿ ಮೂಲ ವಿಸ್ತೀರ್ಣವನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಮೀಸಲು ಪ್ರದೇಶಗಳಲ್ಲಿ ಗಿಡಮರ ಅಥವಾ ಜೀವ ವೈವಿಧ್ಯ ಉದ್ಯಾನ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದೂ ಸಲಹೆ ನೀಡಿದೆ.

‘ಪ್ರೇಕ್ಷಣೀಯ ಸ್ಥಳವಾಗಲಿದೆ ರಾಜಕಾಲುವೆ’

'ನಾಗರಿಕರ ನೀರ ಹಾದಿ' ಯು ರಾಜಕಾಲುವೆಗಳನ್ನು ಪ್ರೇಕ್ಷಣೀಯಗೊಳಿಸುವ ಯೋಜನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಯೋಜನೆ ಇದು. ಪ್ರಥಮತಃ ನಾವು ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರುವರೆಗಿನ 11.5 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಪಡಿಸಲಿದ್ದೇವೆ' ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥಪ್ರಸಾದ್ ಪ್ರಜಾವಾಣಿಗೆ ತಿಳಿಸಿದರು.

'ಮಳೆನೀರು ಹರಿಸಲೆಂದು ಪೂರ್ವಿಕರು ರಾಜಕಾಲುವೆ ನಿರ್ಮಿಸಿದರು. ಈಗ ಅವುಗಳಲ್ಲಿ ಮಳೆ ನೀರಿನ ಬದಲು ಕೊಳಚೆ ನೀರು ಹರಿಯುತ್ತದೆ. ಅದು ಕಸ ಹಾಕಲು ಬಳಕೆ ಆಗುತ್ತಿದೆ. ಇಂತಹ ಚಟುವಟಿಕೆಗೆ ಕಡಿವಾಣ ಹಾಕುತ್ತೇವೆ. ಕೋರಮಂಗಲ ಕಣಿವೆಯ ಈ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಮಳೆ ನೀರು ಮಾತ್ರ ಹರಿಯುವಂತೆ ಮಾಡುತ್ತೇವೆ. ಉಳಿದ ಅವಧಿಯಲ್ಲಿ ಶುದ್ಧೀಕರಿಸಿದ ತ್ಯಾಜ್ಯನೀರು ಹರಿಯುವಂತೆ ಮಾಡುತ್ತೇವೆ. ಆ ನೀರು ದುರ್ವಾಸನೆ ಬೀರದು. ಕಾಲುವೆಯ ಪಕ್ಕ ಉದ್ಯಾನ, ನಡಿಗೆ ಪಥ ಅಭಿವೃದ್ಧಿ
ಪಡಿಸುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.