ADVERTISEMENT

ಮಂತ್ರಿ ಮಾಲ್‌ಗೆ ಬಿಬಿಎಂಪಿ ಬೀಗ

ಅಧಿಕಾರಿಗಳ ಕಾರ್ಯಾಚರಣೆ ಬಳಿಕ ₹ 5 ಕೋಟಿ ಬಾಕಿ ತೆರಿಗೆ ಪಾವತಿಸಿದ ಕಟ್ಟಡ ಮಾಲೀಕರು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 18:54 IST
Last Updated 30 ಸೆಪ್ಟೆಂಬರ್ 2021, 18:54 IST
ಸಂಪಿಗೆ ರಸ್ತೆ ಬಳಿಯ ಮಂತ್ರಿ ಮಾಲ್‌ ಕಟ್ಟಡಕ್ಕೆ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಗುರುವಾರ ಭೇಟಿ ನೀಡಿದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ (ಎಡದಿಂದ ನಾಲ್ಕನೆಯವರು) ನೇತೃತ್ವದ ಅಧಿಕಾರಿಗಳ ತಂಡ
ಸಂಪಿಗೆ ರಸ್ತೆ ಬಳಿಯ ಮಂತ್ರಿ ಮಾಲ್‌ ಕಟ್ಟಡಕ್ಕೆ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಗುರುವಾರ ಭೇಟಿ ನೀಡಿದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ (ಎಡದಿಂದ ನಾಲ್ಕನೆಯವರು) ನೇತೃತ್ವದ ಅಧಿಕಾರಿಗಳ ತಂಡ   

ಬೆಂಗಳೂರು: ಆಸ್ತಿ ತೆರಿಗೆಯ ಹಳೆ ಬಾಕಿ ಪಾವತಿಸದ ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ಗೆ (ಅಭಿಷೇಕ್‌ ಡೆವಲಪರ್ಸ್‌) ಬಿಬಿಎಂಪಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಬೀಗ ಹಾಕಿದರು. ಪಾಲಿಕೆಯ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡವು ಮಾಲ್‌ನ ವಹಿವಾಟುಗಳನ್ನು ಸುಮಾರು ಒಂದು ಗಂಟೆ ಬಂದ್ ಮಾಡಿಸಿದ ಬಳಿಕ ಕಟ್ಟಡ ಮಾಲೀಕರು ₹ 5 ಕೋಟಿ ಮೊತ್ತದ ಡಿ.ಡಿ.ಯನ್ನು ಪಾಲಿಕೆಗೆ ಪಾವತಿಸಿದರು.

ಬೀಗ ಹಾಕಿದ್ದ ಸಂದರ್ಭದಲ್ಲಿ ಮಾಲ್‌ಗೆ ಬಂದ ಗ್ರಾಹಕರನ್ನು ಮಾರ್ಷಲ್‌ಗಳು ಹಿಂದಕ್ಕೆ ಕಳುಹಿಸಿದರು. ಕಟ್ಟಡ ಮಾಲೀಕರು ಡಿ.ಡಿ ನೀಡಿದ ಬಳಿಕವಷ್ಟೇ ಮಾಲ್‌ನಲ್ಲಿದ್ದ ಮಳಿಗೆಗಳು ವಹಿವಾಟು ನಡೆಸಲು ಬಿಬಿಎಂಪಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು.

'ಆಸ್ತಿ ತೆರಿಗೆಯ ಹಳೆ ಬಾಕಿ ಪಾವತಿಸುವಂತೆ ಮಂತ್ರಿ ಮಾಲ್‌ನ ಮಾಲೀಕರಿಗೆ ಅನೇಕ ಬಾರಿ ನೋಟಿಸ್ ಜಾರಿಮಾಡಿದ್ದೆವು. ಕಳೆದ ಸಾಲಿನಲ್ಲೂ ಮಾಲ್‌ನ ವಹಿವಾಟು ಸ್ಥಗಿತಗೊಳಿಸಿದ್ದೆವು. ಆಗ ಮಾಲೀಕರು ಕೋವಿಡ್ ಕಾರಣ ನೀಡಿ ಕಾಲಾವಕಾಶ ಕೇಳಿದ್ದರು. ನಮ್ಮ ನೋಟಿಸ್‌ಗಳಿಗೆ ಮಾಲ್‌ನ‌ ಮಾಲೀಕರು ಸ್ಪಂದಿಸದ ಕಾರಣ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ವಿಶೇಷ ಆಯುಕ್ತ (ಕಂದಾಯ) ಎಸ್.ಬಸವರಾಜು ನಿರ್ದೇಶನದಂತೆ ಬಾಕಿ ತೆರಿಗೆ ವಸೂಲಿಗೆ ಕ್ರಮ ಕೈಗೊಂಡಿದ್ದೇವೆ' ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ಮಂತ್ರಿ ಮಾಲ್ 2018-19ರಿಂದ ಈ ಸಾಲಿನವರೆಗೆ ₹ 39.49 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ಆಸ್ತಿ ತೆರಿಗೆಯ ಮೊತ್ತ ₹ 27.22 ಕೋಟಿ. ಒಟ್ಟು ಬಾಕಿ ಮೊತ್ತದಲ್ಲಿ ₹ 400ರಂತೆ ದಂಡನಾ ಶುಲ್ಕ ಹಾಗೂ ₹ 28,800 ಕಸ ವಿಲೇವಾರಿ ಸೆಸ್‌ ಮತ್ತು ₹ 12.26 ಕೋಟಿ ಬಡ್ಡಿ ಕೂಡಾ ಸೇರಿದೆ. ಮಾಲೀಕರು ₹ 5 ಕೋಟಿ ಪಾವತಿಸಿದ್ದು, ಇನ್ನೂ ₹ 34.49 ಕೋಟಿ ಪಾವತಿಸಬೇಕಿದೆ. ಬಾಕಿ ಮೊತ್ತವನ್ನು ಅ.31ರ ಒಳಗೆ ಪಾವತಿಸುವುದಾಗಿ ಕಟ್ಟಡದ ಮಾಲೀಕರು ಲಿಖಿತ ಭರವಸೆ ನೀಡಿದ್ದಾರೆ ಎಂದು ಬಿಬಿಎಂಪಿ
ತಿಳಿಸಿದೆ.

2018–19ನೇ ಸಾಲಿನಲ್ಲಿ ₹ 10.43 ಕೋಟಿ ಆಸ್ತಿ ತೆರಿಗೆ ಪಾವತಿಗಾಗಿ ಕಟ್ಟಡದ ಮಾಲೀಕರು ಚೆಕ್‌ ನೀಡಿದ್ದರು. ಅವರ ಬ್ಯಾಂಕ್‌ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಚೆಕ್‌ ಅಮಾನ್ಯಗೊಂಡಿತ್ತು. ಈ ಸಂಬಂಧ ಬಿಬಿಎಂಪಿಯು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.