ADVERTISEMENT

ಬಿಬಿಎಂಪಿ: ವಿಶೇಷ, ವಲಯ ಆಯುಕ್ತರ ವರ್ಗಾವಣೆ ಗೊಂದಲ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 23:00 IST
Last Updated 13 ಸೆಪ್ಟೆಂಬರ್ 2023, 23:00 IST
<div class="paragraphs"><p>&nbsp;ಬಿಬಿಎಂಪಿ</p></div>

 ಬಿಬಿಎಂಪಿ

   

ಬೆಂಗಳೂರು: ಬಿಬಿಎಂಪಿ ವಲಯ ಆಯುಕ್ತರು ಹಾಗೂ ಕಂದಾಯ, ಹಣಕಾಸು ವಿಭಾಗಕ್ಕೇ ವಿಶೇಷ ಆಯುಕ್ತರನ್ನು ಪ್ರತ್ಯೇಕವಾಗಿ ನಿಯೋಜಿಸಿ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿರುವುದು ಗೊಂದಲ ಸೃಷ್ಟಿಸಿದೆ.

ಬಿಬಿಎಂಪಿ ಕಾಯ್ದೆ ಪ್ರಕಾರ ವಿಶೇಷ ಆಯುಕ್ತರ ಹುದ್ದೆ ಇಲ್ಲ. ಅದರಲ್ಲಿರುವುದು 8 ವಲಯ ಆಯುಕ್ತರ ಹುದ್ದೆ. ಈ ವಲಯ ಆಯುಕ್ತರನ್ನೇ ಹಣಕಾಸು, ಆಡಳಿತ, ಆರೋಗ್ಯ, ಕೆರೆ, ತೋಟಗಾರಿಕೆ, ಉದ್ಯಾನ, ಯೋಜನೆ, ಬೃಹತ್‌ ನೀರುಗಾಲುವೆ, ಘನತ್ಯಾಜ್ಯ ನಿರ್ವಹಣೆ, ಕಲ್ಯಾಣ, ಮಾರುಕಟ್ಟೆ, ಜಾಹೀರಾತು, ಕಂದಾಯ ಹೀಗೆ ಹಲವು ವಿಭಾಗಗಳನ್ನು ವಿಶೇಷ ಆಯುಕ್ತರ ಹೊಣೆ ನೀಡಲಾಗಿತ್ತು.

ADVERTISEMENT

ಸರ್ಕಾರ ಬುಧವಾರ ಹೊರಡಿಸಿರುವ ವರ್ಗಾವಣೆ ಆದೇಶದಲ್ಲಿ, ಬೆಳಗಾವಿಯ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರನ್ನು ಬಿಬಿಎಂಪಿ ಹಣಕಾಸು ವಿಭಾಗಕ್ಕೆ ವಿಶೇಷ ಆಯುಕ್ತರನ್ನಾಗಿ ನೇಮಿಸಿದೆ. ಈ ಹುದ್ದೆಯಲ್ಲಿದ್ದ ಜಯರಾಂ ರಾಯಪುರ ಅವರು ದಕ್ಷಿಣ ವಲಯ ಆಯುಕ್ತರಾಗಿಯೂ ಇದ್ದರು. ಆದರೆ, ವಲಯ ಹುದ್ದೆಯನ್ನು ಯಾರಿಗೂ ತೋರಿಲ್ಲ. ಜಯರಾಂ ರಾಯಪುರ ಅವರನ್ನು ಅದರಿಂದ ಮುಕ್ತಿಗೊಳಿಸಿಲ್ಲ.

ಇದೇ ಆದೇಶದಲ್ಲಿ, ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರಾಗಿದ್ದ, ಪಶ್ಚಿಮ ವಲಯ ಆಯುಕ್ತರೂ ಆಗಿದ್ದ ಆರ್‌.ಎಲ್‌. ದೀಪಕ್‌ ಅವರನ್ನು ಕಂದಾಯ ವಿಭಾಗದ ವಿಶೇಷ ಆಯುಕ್ತ ಹುದ್ದೆಯಿಂದ ವಲಯ ಆಯುಕ್ತ ಹುದ್ದೆಗೆ ವರ್ಗಾಯಿಸಲಾಗಿದೆ. ಈ ಆದೇಶದ ಪ್ರಕಾರ ವಿಶೇಷ ಆಯುಕ್ತ ಹಾಗೂ ವಲಯ ಆಯುಕ್ತ ಎಂಬ ಎರಡು ಹುದ್ದೆಗಳಿವೆ. ಆದರೆ, ಬಿಬಿಎಂಪಿ ಕಾಯ್ದೆಯಲ್ಲಿ 8 ವಲಯ ಆಯುಕ್ತರಿಗೆ ಮಾತ್ರ ಅವಕಾಶ ಇರುವುದು.

ಇನ್ನು ರಾಜರಾಜೇಶ್ವರಿನಗರ ವಲಯ ಆಯುಕ್ತರನ್ನಾಗಿ ಸುರಾಲ್ಕರ್‌ ವಿಕಾಸ್‌ ಕಿಶೋರ್‌ ಅವರನ್ನು ವರ್ಗಾಯಿಸಲಾಗಿದೆ. ಈ ಹುದ್ದೆಯನ್ನು ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ರೆಡ್ಡಿ ಶಂಕರ್‌ ಬಾಬು ಅವರು ಹೆಚ್ಚುವರಿಯಾಗಿ ಹೊಂದಿದ್ದರು. 

ಅನುಮೋದಿತ ಹುದ್ದೆಯಲ್ಲಿರುವ ಎಂಟು ವಲಯ ಆಯುಕ್ತರಿಗೇ ವಿಭಾಗಗಳ ಹೊಣೆಯನ್ನೂ ನೀಡಲಾಗುತ್ತಿತ್ತು. ವಿಶೇಷ ಆಯುಕ್ತರ ಹುದ್ದೆ ಹೆಚ್ಚುವರಿಯಾಗಿರುತ್ತಿತ್ತು. ಆದರೆ ಇತ್ತೀಚೆಗೆ ಕಾಯ್ದೆಯಲ್ಲಿಲ್ಲದ ವಿಶೇಷ ಆಯುಕ್ತರ ಹುದ್ದೆಗೆ ವರ್ಗಾವಣೆಯಾಗುತ್ತಿದ್ದು, ವಲಯ ಆಯುಕ್ತರ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಅನುಮೋದಿತ ಹುದ್ದೆ ಅಲ್ಲದಿದ್ದರೂ ಅದಕ್ಕೆ ಸರ್ಕಾರವೇ ನೇಮಕ ಮಾಡುತ್ತಿರುವುದು ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಮಾಹಿತಿ ಹಕ್ಕು ಕೇಂದ್ರದ ಅಮರೇಶ್‌ ಆರೋಪಿಸಿದರು.

‘ಬಿಬಿಎಂಪಿ ಅನುಮೋದನೆ ಇಲ್ಲದ ಹಲವು ಹುದ್ದೆಗಳಿವೆ. ಅವುಗಳಿಗೆ ಆಗಾಗ್ಗೆ ನಿಯೋಜನೆ ಕೂಡ ನಡೆಯುತ್ತಿದೆ. ಬಿಬಿಎಂಪಿಯ ವಿಭಾಗಗಳು ಹಾಗೂ ವಲಯಗಳು ಸೇರಿದರೆ ಸುಮಾರು 25 ಐಎಎಸ್‌ ಅಧಿಕಾರಿಗಳಾಗುತ್ತಾರೆ. 8 ಐಎಎಸ್ ಅಧಿಕಾರಿಗಳ ಹುದ್ದೆಗೆ ಮಾತ್ರ ಅನುಮೋದನೆ ಇದೆ. ಉಳಿದವರಿಗೆ ವೇತನ ಹಾಗೂ ಕಚೇರಿ ನಿರ್ವಹಣೆಯ ಅನಧಿಕೃತವಾಗಿಯೇ ಪಾವತಿಯಾಗುತ್ತಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಸ್ಪಷ್ಟ ವಿವರಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.