ADVERTISEMENT

ಬಿಬಿಎಂಪಿ| ₹ 4.15 ಕೋಟಿ ಅವ್ಯವಹಾರ: ಇಬ್ಬರು ಸೆರೆ ಒಬ್ಬ ಸಿಬ್ಬಂದಿ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 19:45 IST
Last Updated 13 ಫೆಬ್ರುವರಿ 2020, 19:45 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಗುತ್ತಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆ ತೆರೆದು ₹4‌.15 ಕೋಟಿ ಅವ್ಯವಹಾರ ನಡೆಸಿದ ಪ್ರಕರಣದ ಪ್ರಮುಖ ಆರೋಪಿಗಳಾದ ಬಿಬಿಎಂಪಿಯ ಹಣಕಾಸು ವಿಭಾಗದ ಲೆಕ್ಕ ಅಧೀಕ್ಷಕರಾದ ರಾಮಮೂರ್ತಿ ಹಾಗೂ ಅನಿತಾ ಅವರನ್ನು ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್‌) ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಇನ್ನೊಬ್ಬ ಆರೋಪಿಯಾಗಿರುವ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ತಲೆಮರೆಸಿಕೊಂಡಿದ್ದಾರೆ. ರಾಮಮೂರ್ತಿ ಹಾಗೂ ಅನಿತಾ ದಾಖಲೆಗಳನ್ನು ತಿದ್ದಿ ಅಕ್ರಮವಾಗಿ ಹಣ ಪಾವತಿ ಮಾಡಿದ ಹಾಗೂ ರಾಘವೇಂದ್ರ ಹಣದ ಅಕ್ರಮ ವರ್ಗಾವಣೆಗೆ ಸಹಕರಿಸಿದ ಆರೋಪ ಎದುರಿಸುತ್ತಿದ್ದಾರೆ.

ಸಿಜಿಸಿ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಹೊರಮಾವು ವಾರ್ಡ್‌ನಲ್ಲಿ ಒಳಚರಂಡಿ ಕೊಳವೆ ಅಳವಡಿಸಲು ಅಗೆದಿದ್ದ ರಸ್ತೆಗಳ ದುರಸ್ತಿಯ ಕಾಮಗಾರಿಗಳನ್ನು (ಎರಡು ಪ್ಯಾಕೇಜ್‌ಗಳು) ನಡೆಸಿತ್ತು. ಕಂಪನಿಯ ನಿರ್ದೇಶಕ ಸಿ.ಜಿ.ಚಂದ್ರಪ್ಪ ಅವರು ಕಾಮಗಾರಿಯ ₹ 4.43 ಕೋಟಿ ಬಿಲ್ಲನ್ನು ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಯೂನಿಯನ್‌ ಬ್ಯಾಂಕ್‌ನ ಶಾಖೆಗೆ ಜಮೆ ಮಾಡುವಂತೆ ಕೋರಿದ್ದರು. ಆದರೆ, ಹಣಕಾಸು ವಿಭಾಗದ ಅಧಿಕಾರಿಗಳು ಈ ಖಾತೆಗೆ ಹಣ ಪಾವತಿಸುವ ಬದಲು ಹಂಪಿನಗರದ ಜನತಾ ಸೇವಾ ಕೋ–ಆಪರೇಟಿವ್‌ ಬ್ಯಾಂಕ್‌ನ ಶಾಖೆಯಲ್ಲಿ ಸಿ.ಜಿ.ಚಂದ್ರಪ್ಪ ಎಂಬ ಹೆಸರಿನ ಖಾತೆಗೆ ಫೆ 4ರಂದು ₹ 4.15 ಕೋಟಿ (ಕ್ರಮಬದ್ಧ ಕಡಿತದ ಬಳಿಕ) ಬಿಲ್‌ ಜಮೆ ಮಾಡಿದ್ದರು. ಈ ಬಗ್ಗೆ ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್‌ ಕುಮಾರ್ ಅವರಿಗೆ ಸಿ.ಜಿ.ಚಂದ್ರಪ್ಪ ಬುಧವಾರ ದೂರು ನೀಡಿದ್ದರು. ಆಯುಕ್ತರು ರಾಮ ಮೂರ್ತಿ, ಅನಿತಾ ಹಾಗೂ ರಾಘವೇಂದ್ರ ಅವರನ್ನು ಅಮಾನತು ಮಾಡಿದ್ದರು.

ADVERTISEMENT

ಬ್ಯಾಂಕ್‌ ಖಾತೆ ಸ್ಥಗಿತಕ್ಕೆ ಕೋರಿಕೆ:‘ಜನತಾ ಸೇವಾ ಕೋ–ಆಪರೇಟಿವ್‌ ಬ್ಯಾಂಕ್‌ನ ಹಂಪಿನಗರ ಶಾಖೆಯಲ್ಲಿ ಸಿ.ಜಿ.ಚಂದ್ರಪ್ಪ ಹೆಸರಿನ ಖಾತೆಗೆ ಜಮೆಯಾಗಿದ್ದ ಒಟ್ಟು ಮೊತ್ತದಲ್ಲಿ ₹ 1 ಕೋಟಿ ಮೊತ್ತದ ಡಿಮಾಂಡ್‌ ಡ್ರಾಫ್ಟ್‌ ಪಡೆಯಲಾಗಿದೆ. ಸ್ವಲ್ಪ ಹಣವನ್ನು ಮಾತ್ರ ಡ್ರಾ ಮಾಡಲಾಗಿದೆ. ಇನ್ನುಳಿದ ಮೊತ್ತವನ್ನು ಮೂರು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ. ಆ ಖಾತೆಯನ್ನು ಸ್ಥಗಿತಗೊಳಿಸುವಂತೆ ಹಾಗೂ ಡಿ.ಡಿ.ಯ ಹಣವನ್ನು ಪಾವತಿಸದಂತೆ ಬ್ಯಾಂಕಿನ ವ್ಯವಸ್ಥಾಪಕರನ್ನು ಕೋರಿದ್ದೇವೆ’ ಎಂದು ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.