ADVERTISEMENT

ತೂಗುಯ್ಯಾಲೆಯಲ್ಲಿ ಇಂದಿರಾ ಕ್ಯಾಂಟೀನ್‌ ಭವಿಷ್ಯ

2019–20ರ ಬಜೆಟ್‌ನಲ್ಲಿ ಅನುದಾನ ನೀಡದ ಸರ್ಕಾರ * ಹಿಂದಿನ ಗುತ್ತಿಗೆ ಅವಧಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 20:12 IST
Last Updated 27 ಆಗಸ್ಟ್ 2019, 20:12 IST
ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನದ ಊಟಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಜನರು –ಪ್ರಜಾವಾಣಿ ಚಿತ್ರ
ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನದ ಊಟಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಜನರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭಿಸಿದ್ದ ‘ಇಂದಿರಾ ಕ್ಯಾಂಟೀನ್’ಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

2017ರ ಆ.16ರಂದು ಆರಂಭವಾದ ಈ ಕ್ಯಾಂಟೀನ್‌ಗಳು ಭಾರಿ ಜನಪ್ರಿಯತೆ ಗಳಿಸಿದ್ದವು. ಕ್ಯಾಂಟೀನ್‌ಗಳ ನಿರ್ವಹಣೆಗೆ ರಾಜ್ಯ ಸರ್ಕಾರ 2019–20ನೇ ಸಾಲಿನಲ್ಲಿ ಅನುದಾನ ನೀಡಿಲ್ಲ. ಇನ್ನೊಂದೆಡೆ, ಬಿಬಿಎಂಪಿಯೂ ಈ ಸಾಲಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಒದಗಿಸಿಲ್ಲ. ಕ್ಯಾಂಟೀನ್‌ ನಿರ್ವಹಣೆಯ ಹಿಂದಿನ ಗುತ್ತಿಗೆ ಅವಧಿ ಆ.15ಕ್ಕೆ ಅಂತ್ಯಗೊಂಡಿದೆ. 15 ದಿನಗಳ ಮಟ್ಟಿಗೆ ಈ ಹಿಂದಿನ ಗುತ್ತಿಗೆದಾರರ ಮೂಲಕವೇ ತಾತ್ಕಾಲಿಕವಾಗಿ ಇವುಗಳನ್ನು ನಿರ್ವಹಿಸಲು ಪಾಲಿಕೆ ಕ್ರಮಕೈಗೊಂಡಿದೆ. ಈ ಕ್ಯಾಂಟೀನ್‌ಗಳು ಆರಂಭವಾದ ಎರಡೇ ವರ್ಷಗಳಲ್ಲಿ ಇತಿಹಾಸದ ಪುಟ ಸೇರುವ ಆತಂಕ ಎದುರಿಸುತ್ತಿವೆ.

‘ಸರ್ಕಾರ ಅಥವಾ ಪಾಲಿಕೆ ಅನುದಾನ ಒದಗಿಸದಿದ್ದರೆ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಪಾಲಿಕೆ ಕೌನ್ಸಿಲ್‌ ಸಭೆಯಲ್ಲೇ ಮಂಗಳವಾರ ಸ್ಪಷ್ಟಪಡಿಸಿದರು.

ADVERTISEMENT

‘ಕ್ಯಾಂಟೀನ್‌ಗಳ ಭದ್ರತಾ ವ್ಯವಸ್ಥೆ ಹಾಗೂ ಆವರಣ ಗೋಡೆಗಳಿಗಾಗಿ 2017ರಲ್ಲಿ ₹ 24.37 ಕೋಟಿ ವೆಚ್ಚ ಮಾಡಲಾಗಿತ್ತು. 2018–19ರಲ್ಲೂ ಸರ್ಕಾರ ಹಂಚಿಕೆ ಮಾಡಿದಷ್ಟು ಅನುದಾನ ಬಿಡುಗಡೆ ಮಾಡದ ಕಾರಣ ₹ 21.66 ಕೋಟಿ ವೆಚ್ಚವನ್ನುಪಾಲಿಕೆ ಭರಿಸಿದೆ. ಇವುಗಳನ್ನೂ ಸೇರಿಸಿ, 2019–20ನೇ ಸಾಲಿಗೆ ₹ 210 ಕೋಟಿ ಅನುದಾನ ಹಂಚಿಕೆ ಮಾಡುವಂತೆ ಕೋರಿ 2019ರ ಜ.9ರಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೆವು. ಆದರೂ, ಸರ್ಕಾರ ಬಜೆಟ್‌ನಲ್ಲಿ ಯಾವುದೇ ಅನುದಾನ ಕಾಯ್ದಿರಿಸಲಿಲ್ಲ. ಬಳಿಕ, ಏಪ್ರಿಲ್‌ 9ರಂದು ಹಾಗೂ ಜೂನ್‌ 12ರಂದು ಮತ್ತೆ ಪತ್ರ ಬರೆದು ಪೂರಕ ಬೆಜೆಟ್‌ನಲ್ಲಾದರೂ ಅನುದಾನ ನೀಡುವಂತೆ ಕೋರಿದ್ದೇವೆ. ಆದರೆ, ಇನ್ನೂ ಮಂಜೂರಾಗಿಲ್ಲ’ ಎಂದು ವಸ್ತುಸ್ಥಿತಿ ವಿವರಿಸಿದರು.

‘ಸರ್ಕಾರ ಇಂದಿರಾ ಕ್ಯಾಂಟೀನ್‌ ಕುರಿತು ತನಿಖೆ ನಡೆಸಲು ಮುಂದಾಗಿರುವುದು ಇವುಗಳನ್ನು ಮುಚ್ಚಲು ನಡೆಸಿರುವ ಹುನ್ನಾರ. ಲಕ್ಷಾಂತರ ಮಂದಿಗೆ ರಿಯಾಯಿತಿ ದರದಲ್ಲಿ ಊಟ ಒದಗಿಸುತ್ತಿರುವ ಇಂದಿರಾ ಕ್ಯಾಂಟೀನ್‌ ಸ್ಥಗಿತಗೊಳಿಸಬಾರದು. ಅದರ ಹೆಸರನ್ನೂ ಬದಲಾಯಿಸಬಾರದು’ ಎಂದು ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಸಭೆಯಲ್ಲಿ ಒತ್ತಾಯಿಸಿದರು.

‘ಇಂದಿರಾ ಕ್ಯಾಂಟೀನ್‌ಗೆ ಹಣದ ಕೊರತೆ ಎದುರಾದರೆ ಪಾಲಿಕೆಯ ಕಲ್ಯಾಣ ಕಾರ್ಯಕ್ರಮಗಳ ಅನುದಾನವನ್ನಾದರೂ ಬಳಸಿ ಅದನ್ನು ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಸದಸ್ಯ ಆರ್‌.ಸಂಪತ್‌ ರಾಜ್‌, ‘ಬಿಜೆಪಿಯವರು ಬೇಕಿದ್ದರೆ ವಾಜಪೇಯಿ ಕ್ಯಾಂಟೀನ್‌ ಆರಂಭಿಸಿ ಇದಕ್ಕಿಂತ ಉತ್ತಮ ಆಹಾರ ನೀಡಲಿ. ಆದರೆ, ಈಗಿರುವ ಕ್ಯಾಂಟೀನ್‌ ನಿಲ್ಲಿಸಬಾರದು’ ಎಂದು ಕೋರಿದರು.

ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಕ್ಯಾಂಟೀನ್‌ ಸ್ಥಗಿತಗೊಳಿಸಬೇಕಾದ ಪ್ರಮೇಯ ಸೃಷ್ಟಿಯಾಗುವುದಕ್ಕೆ ಸಮ್ಮಿಶ್ರ ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡದೇ ಇರುವುದು ಕಾರಣ. ಹೊಸ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬೇಡ. ಈಗಿನ ಸರ್ಕಾರ ಬೋಗಸ್‌ ಬಿಲ್‌ಗಳ ಬಗ್ಗೆ ಮಾತ್ರ ತನಿಖೆಗೆ ಆದೇಶಿಸಿದೆ ಅಷ್ಟೇ’ ಎಂದರು.

ಮೇಯರ್‌ ಗಂಗಾಂಬಿಕೆ, ‘ಇಂದಿರಾ ಕ್ಯಾಂಟೀನ್‌ಗೆ ಪೂರಕ ಬಜೆಟ್‌ನಲ್ಲಿ ಅನುದಾನನೀಡುವುದಾಗಿ ಈ ಹಿಂದಿನ ಉಪಮುಖ್ಯಮಂತ್ರಿಯವರು ಭರವಸೆ ನೀಡಿದ್ದರಿಂದ ಪಾಲಿಕೆ ಬಜೆಟ್‌ನಲ್ಲಿ ಅನುದಾನ ನೀಡಿಲ್ಲ. ಮುಖ್ಯಮಂತ್ರಿಯನ್ನು ಭೇಟಿಯಾಗಿ ಹಣ ಬಿಡುಗಡೆಗೆ ಒತ್ತಾಯಿಸುತ್ತೇವೆ’ ಎಂದರು.

2017ರ ಆ. 16ರಂದು ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿತ್ತು.

ಅನುದಾನ ಸಿಗದಿದ್ದರೆ ಟೆಂಡರ್‌ ರದ್ದು?

2019–20ನೇ ಸಾಲಿಗೆ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಬಿಬಿಎಂಪಿ ಈಗಾಗಲೇ ಟೆಂಡರ್‌ ಆಹ್ವಾನಿಸಿದೆ. ಒಂದು ವೇಳೆ ಆ.31ರ ಒಳಗೆ ಸರ್ಕಾರ ಅಥವಾ ಪಾಲಿಕೆ ಇದಕ್ಕೆ ಅನುದಾನ ಒದಗಿಸದೇ ಇದ್ದರೆ ಈ ಟೆಂಡರ್‌ ಕೂಡಾ ರದ್ದಾಗುವ ಅಪಾಯವಿದೆ.

ಕೋರಂ ಇಲ್ಲದ ಕಾರಣ ನಿರ್ಣಯ ಮುಂದಕ್ಕೆ

ಇಂದಿರಾ ಕ್ಯಾಂಟೀನ್‌ಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದುವರಿಸುವ ಹಾಗೂ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಅನುದಾನ ಬಿಡುಗಡೆಗೆ ಒತ್ತಾಯಿಸುವ ಕುರಿತು ಸಭೆಯಲ್ಲಿ ನಿರ್ಣಯ ಮಂಡಿಸಲು ಆಡಳಿತ ಪಕ್ಷ ಸಿದ್ಧತೆ ನಡೆಸಿತ್ತು.

ಅಬ್ದುಲ್‌ ವಾಜಿದ್‌ ನಿರ್ಣಯ ಮಂಡಿಸಲು ಮುಂದಾದಾಗ ಕ್ರಿಯಾಲೋಪ ಎತ್ತಿದ ಪದ್ಮನಾಭ ರೆಡ್ಡಿ, ‘ಸಭೆಯಲ್ಲಿ ಕೋರಂ ಇಲ್ಲ. ಮೂರನೇ ಒಂದು ಭಾಗದಷ್ಟು ಸದಸ್ಯರು ಹಾಜರಿಲ್ಲದ ಸಂದರ್ಭದಲ್ಲಿ ಮಂಡಿಸುವ ನಿರ್ಣಯಕ್ಕೆ ಮಾನ್ಯತೆ ಇರುವುದಿಲ್ಲ’ ಎಂದು ತಿಳಿಸಿದರು.

ಬಳಿಕ ಸಭೆಯನ್ನು ಇದೇ 31ಕ್ಕೆ ಮುಂದೂಡಿದಮೇಯರ್‌, ‘ಅಂದೇ ಈ ಕುರಿತು ನಿರ್ಣಯ ಕೈಗೊಳ್ಳೋಣ’ ಎಂದು ತಿಳಿಸಿದರು.

ಪರಮೇಶ್ವರ ವಿರುದ್ಧ ಗರಂ

ಇಂದಿರಾ ಕ್ಯಾಂಟೀನ್‌ಗೆ ಮೈತ್ರಿ ಸರ್ಕಾರ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸದೇ ಇದ್ದುದಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಮ್ಮ ಪಕ್ಷದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಒದಗಿಸದೇ ಇದ್ದುದು ಗಂಭೀರ ಲೋಪ. ಇದಕ್ಕೆ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಜಿ.ಪರಮೇಶ್ವರ ಅವರೇ ನೇರ ಹೊಣೆ. ಪೂರಕ ಬಜೆಟ್‌ನಲ್ಲಾದರೂ ಇದಕ್ಕೆ ಅನುದಾನ ಒದಗಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಅವರು ಪ್ರಯತ್ನ ಮಾಡಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸದಸ್ಯರೊಬ್ಬರು ಆರೋಪ ಮಾಡಿದರು.

***

* ಇಂದಿರಾ ಕ್ಯಾಂಟೀನ್‌ಗಳು (ಸ್ಥಿರ) ಬಿಬಿಎಂಪಿ ವ್ಯಾಪ್ತಿಯಲ್ಲಿವೆ -173

* ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಿವೆ -18

* ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇದುವರೆಗೆ ಊಟ ಖರೀದಿಸಿದವರ ಒಟ್ಟು ಸಂಖ್ಯೆ -14.47 ಕೋಟಿ

* ರಾಜ್ಯ ಸರ್ಕಾರ ಇಂದಿರ ಕ್ಯಾಂಟಿನ್‌ ನಿರ್ವಹಣೆಗೆ 2017–18ರಲ್ಲಿ ಬಿಡುಗಡೆ ಮಾಡಿದ ಮೊತ್ತ -₹ 100 ಕೋಟಿ

* ಕ್ಯಾಂಟೀನ್‌ಗಳ ಮೂಲಸೌಕರ್ಯ ಹಾಗೂ ಭದ್ರತೆಗಾಗಿ ಪಾಲಿಕೆ 2017–18ರಲ್ಲಿ ಮಾಡಿದ ವೆಚ್ಚ -₹ 24.37 ಕೋಟಿ

* ಕ್ಯಾಂಟಿನ್‌ ನಿರ್ವಹಣೆಗೆ 2017–18ರಲ್ಲಿ ರಾಜ್ಯ ಸರ್ಕಾರ ಹಂಚಿಕೆ ಮಾಡಿದ ಮೊತ್ತ -₹ 145 ಕೋಟಿ

* ಕ್ಯಾಂಟಿನ್‌ ನಿರ್ವಹಣೆಗೆ 2017–18ರಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಮೊತ್ತ -₹ 115 ಕೋಟಿ

* ಕ್ಯಾಂಟಿನ್‌ ನಿರ್ವಹಣೆಗೆ 2017–18ರಲ್ಲಿ ಬಿಬಿಎಂಪಿ ವೆಚ್ಚ ಮಾಡಿರುವ ಮೊತ್ತ -₹ 137 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.