ADVERTISEMENT

ಕೋವಿಡ್: ಮಹದೇವಪುರ ವಲಯದಲ್ಲಿ ಹೆಚ್ಚು ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 22:11 IST
Last Updated 11 ಮಾರ್ಚ್ 2021, 22:11 IST

ಬೆಂಗಳೂರು: ಬಿಬಿಎಂಪಿಯ ಮಹದೇವಪುರ ವಲಯದ ವಾರ್ಡ್‌ಗಳಲ್ಲಿ ಕಳೆದ ಎರಡು ತಿಂಗಳಿನಿಂದ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ.

ಕಳೆದ 10 ದಿನಗಳಲ್ಲಿ ನಗರದಲ್ಲಿ 3,808 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಬಿಬಿಎಂಪಿ ಹೇಳಿದೆ. ಈ ಪೈಕಿ, ಬೆಳ್ಳಂದೂರು, ಹಗದೂರು, ಶಾಂತಲಾನಗರ ಹಾಗೂ ಗಾಂಧಿನಗರ ವಾರ್ಡ್‌ಗಳಲ್ಲಿ ಹೆಚ್ಚು ಪ್ರಕರಣಗಳು ದೃಢ ಪಟ್ಟಿವೆ.

ಮಹದೇವಪುರ ವಲಯದಲ್ಲಿ ಕಳೆದ ನವೆಂಬರ್‌ನಿಂದಲೂ ಅತಿಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಈ ವಲಯದಲ್ಲಿ 450ರಿಂದ 500 ಅಪಾರ್ಟ್‌ಮೆಂಟ್‌ಗಳಿದ್ದು, ‘ಕ್ಲಸ್ಟರ್‌ ಸೋಂಕು’ ಹೆಚ್ಚು ವರದಿಯಾಗಿವೆ. ಕೇರಳದ ಸಂಪರ್ಕದ ಕಾರಣ ಪ್ರಕರಣಗಳು ಇಲ್ಲಿ ಹೆಚ್ಚಾಗುತ್ತಿವೆ ಎಂದು ವಲಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಮಾಲ್‌ಗಳು, ಚಲನಚಿತ್ರ ಮಂದಿರಗಳು ಸೇರಿದಂತೆ ಸಾರ್ವಜನಿಕರು ಹೆಚ್ಚು ಸೇರುವ ಸಂಸ್ಥೆ–ಸ್ಥಳಗಳಲ್ಲಿ ಸಂಚಾರ ಮುಕ್ತವಾಗಿದೆ. ಈ ಪ್ರದೇಶಗಳಲ್ಲಿ ಅಂತರ ನಿಯಮ ಪಾಲಿಸಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ಈ ವಲಯದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದರೂ, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕೆ ಹಾಕಿದ್ದ ದಂಡದ ಪ್ರಮಾಣ ತೀರಾ ಕಡಿಮೆ ಇದೆ. ಮಾಸ್ಕ್‌ ಹಾಕದೆ ಅಥವಾ ಅಂತರ ಕಾಪಾಡಿಕೊಳ್ಳದ ಕಾರಣ ದಂಡ ವಿಧಿಸಿದ ಪ್ರಕರಣಗಳ ಸಂಖ್ಯೆ ಈ ವಲಯದಲ್ಲಿ ಶೇ 0.35ನಷ್ಟಿದ್ದರೆ, ಬೊಮ್ಮನಹಳ್ಳಿ ವಲಯದಲ್ಲಿ ಶೇ 1.81ರಷ್ಟು ಇದೆ.

‘ದೇವಸ್ಥಾನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಅಂತರ ಕಾಪಾಡಿಕೊಳ್ಳದ ಹಾಗೂ ಮಾಸ್ಕ್‌ ಧರಿಸದ ಪ್ರಕರಣಗಳ ಪ್ರಮಾಣ ಶೇ 80ಕ್ಕೂ ಹೆಚ್ಚಿದೆ. ಆದರೆ, ಇಲ್ಲಿ ಸೇರಬೇಕಾದ ಜನರ ಗರಿಷ್ಠ ಸಂಖ್ಯೆ ಎಷ್ಟಿರಬೇಕು ಎಂಬುದನ್ನು ಖಚಿತವಾಗಿ ಹೇಳಿರದ ಕಾರಣ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವುದು ಕಷ್ಟವಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

‘ಶಾಂತಲಾ ನಗರ ವಾರ್ಡ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ನಮ್ಮ ಕ್ಷೇತ್ರದಲ್ಲಿ ಜನ ಆತಂಕ ಪಡುವ ಅಗತ್ಯವೂ ಇಲ್ಲ’ ಎಂದು ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.