ADVERTISEMENT

ಕೋವಿಡ್‌ ಲಸಿಕೆ ಹಾಕಿಸಿಕೊಂಡ ಐವರಿಗೆ ಆರೋಗ್ಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 17:37 IST
Last Updated 19 ಜನವರಿ 2021, 17:37 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರ ಕೋವಿಡ್‌ ಲಸಿಕೆ ಹಾಕಿಸಿಕೊಂಡ ಐವರಲ್ಲಿ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆ ಕಂಡು ಬಂದಿದೆ.

‘ಲಸಿಕೆ ಹಾಕಿಸಿಕೊಂಡ ಬಳಿಕ ಐವರಿಗೆ ಗಂಭೀರವಲ್ಲದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವರಿಗೆ ಲಸಿಕೆ ಚುಚ್ಚಿದ ಸ್ಥಳದಲ್ಲಿ ಊತ ಕಂಡುಬರುವುದು, ತಲೆ ಸುತ್ತು ಬರುವುದು, ಜ್ವರ ಬರುವುದು ಮೊದಲಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶೇ 38ರಷ್ಟು ಗುರಿ ಸಾಧನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರ ಒಟ್ಟು 10,343 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅವರಲ್ಲಿ 3,978 ಮಂದಿ ಲಸಿಕೆ ಪಡೆದರು.

ADVERTISEMENT

ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಿಕೊಳ್ಳಲು ನಿರೀಕ್ಷಿತ ಪ್ರಮಾಣದಲ್ಲಿ ಮುಂದೆ ಬರುತ್ತಿಲ್ಲ. ಲಸಿಕೆ ಪಡೆಯುವ ಆರೋಗ್ಯ ಕಾರ್ಯಕರ್ತರ ಶೇಕಡಾವಾರು ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮೊದಲ ದಿನ ಲಸಿಕೆ ಪಡೆಯಲು ಗೊತ್ತುಪಡಿಸಲಾದ ಆರೋಗ್ಯ ಕಾರ್ಯಕರ್ತರಲ್ಲಿ ಶೇ 61ರಷ್ಟು ಮಂದಿ, ಎರಡನೇ ದಿನ ಶೇ 58ರಷ್ಟು ಮಂದಿ ಹಾಗೂ ಮೂರನೇ ದಿನ ಶೇ 42ರಷ್ಟು ಮಂದಿ ಲಸಿಕೆ ಪಡೆದಿದ್ದರು. ಮಂಗಳವಾರ ಈ ಪ್ರಮಾಣ ಶೇ 38ಕ್ಕೆ ಕುಸಿದಿದೆ.

‘ಬೇರೆ ಬೇರೆ ಕಾರಣಗಳಿಂದಾಗಿ ಕೆಲ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೆಸರು ನೋಂದಾಯಿಸಿರುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.