ADVERTISEMENT

ಬೆಂಗಳೂರು| ಇ–ಖಾತಾ: ವಲಯದ ಹೊರಗೂ ಪರಿಶೀಲನೆ

ಭ್ರಷ್ಟಾಚಾರ ಕಡಿಮೆ ಮಾಡಲು ಆನ್‌ಲೈನ್‌ ಅರ್ಜಿ ಇತರೆ ವಿಭಾಗದ ಅಧಿಕಾರಿಗೆ ಹಂಚಿಕೆ: ಮುನೀಶ್‌

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 20:04 IST
Last Updated 5 ಆಗಸ್ಟ್ 2025, 20:04 IST
<div class="paragraphs"><p>ಬಿಬಿಎಂಪಿ</p></div>

ಬಿಬಿಎಂಪಿ

   

ಬೆಂಗಳೂರು: ಇ–ಖಾತಾ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡು, ಭ್ರಷ್ಟಾಚಾರ ನಿಯಂತ್ರಿಸಲು ‘ಫಸ್ಟ್‌ ಇನ್‌ ಫಸ್ಟ್‌ ಔಟ್’ (ಎಫ್‌ಐಎಫ್‌ಒ) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ಇ–ಖಾತಾ ಪ್ರಕ್ರಿಯೆಯಲ್ಲಿ ನಾಗರಿಕರು ಮತ್ತು ಅಧಿಕಾರಿಗಳ ನಡುವಿನ ನೇರ ಸಂಪರ್ಕವನ್ನು ಕಡಿಮೆಗೊಳಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಮೇಲೆ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಧಿಕಾರಿಗಳಿಗೆ ‘ರ‍್ಯಾಂಡಮ್’ ಆಗಿ ವರ್ಗಾವಣೆಯಾಗುತ್ತದೆ. ಅವರು ಮೂರು ದಿನದಲ್ಲಿ ಅರ್ಜಿಯನ್ನು ವಿಲೇವಾರಿ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಆನ್‌ಲೈನ್‌ನಲ್ಲಿ ಅರ್ಜಿಗಳು ಕೆಲವು ವಲಯ ಅಥವಾ ಉಪ ವಿಭಾಗದಲ್ಲಿ ಹೆಚ್ಚಿರುತ್ತವೆ. ಕೆಲವು ಕಡೆ ಕಡಿಮೆ ಇರುತ್ತವೆ. ಹೀಗಾಗಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು  ‘ಮೊದಲು ಬಂದ ಅರ್ಜಿ’ಯೆಂದು ಪರಿಗಣಿಸಿ, ಸಹಾಯಕ ಕಂದಾಯ ಅಧಿಕಾರಿ, ಉಪ ಕಂದಾಯ ಅಧಿಕಾರಿಗಳಿಗೆ ವರ್ಗವಾಗುತ್ತದೆ. ಆಯಾ ಉಪ ವಿಭಾಗದ ಅರ್ಜಿ ಅವರಿಗೇ (ಎಆರ್‌ಒ) ಹೋಗಬೇಕೆಂದೇನೂ ಇಲ್ಲ. ಯಾರಲ್ಲಿ ಕಡಿಮೆ ಕಡತಗಳಿರುತ್ತವೋ ಅವರಿಗೆ ಸ್ವಯಂಚಾಲಿತವಾಗಿ ಅರ್ಜಿ ರವಾನೆಯಾಗುತ್ತದೆ’ ಎಂದು ಹೇಳಿದರು.

ಈ ವ್ಯವಸ್ಥೆಯಿಂದ ನಾಗರಿಕರು ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸುವಂತಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಯಾವ ಕಂದಾಯ ವಿಭಾಗದ ಅಧಿಕಾರಿಯಾದರೂ ಆನ್‌ಲೈನ್‌ ಅರ್ಜಿಯನ್ನು ಪರಿಗಣಿಸಿ, ಇ–ಖಾತಾಗೆ ಅನುಮೋದನೆ ನೀಡುತ್ತಾರೆ. ಇದರಿಂದ ಮಧ್ಯವರ್ತಿಗಳನ್ನು ತಡೆದಂತಾಗುತ್ತದೆ ಎಂದು ಮುನೀಶ್ ತಿಳಿಸಿದರು.

ಆನ್‌ಲೈನ್‌ನಲ್ಲಿ ಅರ್ಜಿ ಹಂಚಿಕೆಯಾದ ಮೂರು ದಿನಗಳಲ್ಲಿ ಅಧಿಕಾರಿ ಅದನ್ನು ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ಹಂತದ ಅಧಿಕಾರಿಗೆ ಅರ್ಜಿ ರವಾನೆಯಾಗುತ್ತದೆ.  ಅವರೂ ಮೂರು ದಿನದಲ್ಲಿ ಅರ್ಜಿ ವಿಲೇವಾರಿ ಮಾಡದಿದ್ದರೆ, ಸ್ವಯಂಚಾಲಿತವಾಗಿ ಇ–ಖಾತಾ ಅನುಮೋದನೆಯಾಗುತ್ತದೆ ಎಂದರು.

ಇ–ಖಾತಾ, ಹೊಸ ಖಾತಾ ಹಾಗೂ ಕಂದಾಯ ವಿಭಾಗಕ್ಕೆ ಸಂಬಂಧಿಸಿದ 50 ಆನ್‌ಲೈನ್‌ ಅರ್ಜಿಗಳನ್ನು ಪ್ರತಿ ಅಧಿಕಾರಿಗೆ ನಿತ್ಯವೂ ಹಂಚಲಾಗುತ್ತದೆ. ಅವುಗಳನ್ನು ಅವರು ವಿಲೇವಾರಿ ಮಾಡಿದ ನಂತರ ಮತ್ತೆ ಅರ್ಜಿ ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.