ADVERTISEMENT

ಬಿಬಿಎಂಪಿ ಚುನಾವಣೆ ವಿವಾದ: ನಾಳೆ ‘ಸುಪ್ರೀಂ’ ವಿಚಾರಣೆ

ರಾಜ್ಯ ಸರ್ಕಾರದ ಅರ್ಜಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 21:26 IST
Last Updated 16 ಡಿಸೆಂಬರ್ 2020, 21:26 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ಬೆಂಗಳೂರು: ಬಿಬಿಎಂಪಿ ಚುನಾವಣೆ ಮುಂದೂಡುವಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಇದರ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಇದೇ 18ರಂದು ಕೈಗೆತ್ತಿಕೊಳ್ಳಲಿದೆ.

1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಈ ಹಿಂದಿನ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯುವ ಮುನ್ನ (2020ರ ಸೆ. 10) ನಡೆಸಿರಲಿಲ್ಲ. ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಮುಖಂಡರಾದ ಎಂ.ಶಿವರಾಜು ಹಾಗೂ ಅಬ್ದುಲ್‌ ವಾಜಿದ್‌ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠವು, ವಾರ್ಡ್‌ವಾರು ಮೀಸಲಾತಿಯ ಅಂತಿಮ ಪಟ್ಟಿ ಪ್ರಕಟವಾದ ಆರು ವಾರಗಳ ಒಳಗೆ ಚುನಾವಣೆ ಪೂರ್ಣಗೊಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಡಿ.10ರಂದು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ‘ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ವಾರ್ಡ್‌ಗಳ ಸಂಖ್ಯೆಯನ್ನು ಕನಿಷ್ಠ 243ಕ್ಕೆ ಹೆಚ್ಚಿಸುವ ಉದ್ದೇಶದಿಂದ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸರ್ಕಾರ ಸಾಂವಿಧಾನಿಕವಾಗಿ ಜಾರಿಗೆ ತಂದ ಕಾನೂನು ತಿದ್ದುಪಡಿಯ ಸಿಂಧುತ್ವವನ್ನು ಹೈಕೋರ್ಟ್‌ ಎತ್ತಿ ಹಿಡಿಯಬೇಕಿತ್ತು. ಕಾನೂನು ತಿದ್ದುಪಡಿಯು ಸಂವಿಧಾನದ 243 (ಯು) ವಿಧಿಯ ಆಶಯಗಳಿಗೆ ವಿರುದ್ಧವಾಗಿಲ್ಲ’ ಎಂದು ಸರ್ಕಾರ ಮೇಲ್ಮನವಿ ಅರ್ಜಿಯಲ್ಲಿ ಹೇಳಿದೆ.

ADVERTISEMENT

‘ಕೆಎಂಸಿ ಕಾಯ್ದೆ ತಿದ್ದುಪಡಿಯಾದ ಬಳಿಕ ಚುನಾಯಿತ ಕೌನ್ಸಿಲ್‌ ಅಧಿಕಾರಾವಧಿ ಮುಗಿಯುವ ಮುನ್ನ ಚುನಾವಣೆ ನಡೆಸಬೇಕು ಎಂಬ ಅಂಶ ಮಹತ್ವ ಕಳೆದುಕೊಳ್ಳುತ್ತದೆ. ಜಾರಿಯಾಗಿರುವ ಕಾನೂನನ್ನು ಸಕಾರಣವಿಲ್ಲದೇ ಅನೂರ್ಜಿತಗೊಳಿಸಲು ಬರುವುದಿಲ್ಲ. ಇದನ್ನು ಹೈಕೋರ್ಟ್ ಗಮನಿಸಿಲ್ಲ’ ಎಂದು ಮೇಲ್ಮನವಿ ಅರ್ಜಿಯಲ್ಲಿ ರಾಜ್ಯ ಸರ್ಕಾರ ಹೇಳಿಕೊಂಡಿದೆ.

2007ರಲ್ಲಿ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಲಾಗಿತ್ತು. ಆ ಬಳಿಕ ನಗರದ ಜನಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರತಿನಿಧಿತ್ವ ಹೊಂದುವ ಉದ್ದೇಶದಿಂದ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ‌ನಗರದಲ್ಲಿ ಪರಿಣಾಮಕಾರಿ ಆಡಳಿತದ ದೃಷ್ಟಿಯಿಂದಲೂ ಇದು ಅನಿವಾರ್ಯ. ಒಂದು ವೇಳೆ ವಾರ್ಡ್‌ ಸಂಖ್ಯೆ ಹೆಚ್ಚಳ ಮಾಡುವ ಕಾಯ್ದೆ ಜಾರಿಗೆ ಅವಕಾಶ ನೀಡದಿದ್ದರೆ ಅದರ ದುಷ್ಪರಿಣಾಮವನ್ನು ನಗರದ ಆಡಳಿತ ವ್ಯವಸ್ಥೆ ಐದು ವರ್ಷಗಳ ಕಾಲ ಎದುರಿಸಬೇಕಾಗುತ್ತದೆ. ಸಂವಿಧಾನದ 243 ಜೆಡ್‌ಎ (2) ವಿಧಿ ಪ್ರಕಾರ ನಗರಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ಕಾನೂನು ರೂಪಿಸುವ ಅಧಿಕಾರ ರಾಜ್ಯದ ಶಾಸಕಾಂಗಕ್ಕಿದೆ. ಈ ಅಂಶವನ್ನು ಗಮನಕ್ಕೆ ತಂದರೂ ಹೈಕೋರ್ಟ್‌ ಪರಿಗಣಿಸಿಲ್ಲ ಎಂಬುದು ಸರ್ಕಾರದ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.