ADVERTISEMENT

ಬಿಬಿಎಂಪಿ: ಶೇ 50ರಷ್ಟು ಮೀಸಲಾತಿಗೆ ಸುಗ್ರೀವಾಜ್ಞೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 20:04 IST
Last Updated 10 ಜೂನ್ 2022, 20:04 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯ ಪ್ರಮಾಣವನ್ನು ಶೇಕಡ 50ಕ್ಕೆ ಸೀಮಿತಗೊಳಿಸಿ ಶುಕ್ರವಾರ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಮೀಸಲಾತಿಯ ಪ್ರಮಾಣಕ್ಕೆ ಮಿತಿ ವಿಧಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020ಕ್ಕೆ ತಿದ್ದುಪಡಿ ತರಲಾಗಿದೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ವಾರ್ಡ್‌ಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಸಬೇಕಿರು
ವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸುವುದರ ಜತೆಗೆ ನೇರ ಚುನಾವಣೆಯಲ್ಲಿ ಭರ್ತಿಮಾಡುವ ಒಟ್ಟು ಸ್ಥಾನಗಳ ಮೂರನೇ ಒಂದರಷ್ಟು ಸ್ಥಾನಗಳು ಮೀರದಂತೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು’ ಎಂಬ ಅಂಶ 2020ರ ಬಿಬಿಎಂಪಿ ಕಾಯ್ದೆಯಲ್ಲಿತ್ತು.

ADVERTISEMENT

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿದ ಪಾಲಿಕೆಯ ಒಟ್ಟು ಸ್ಥಾನಗಳ ಸಂಖ್ಯೆಯು ಶೇ 50ರಷ್ಟನ್ನು ಮೀರುವಂತಿಲ್ಲ’ ಎಂಬ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದೆ.

ಒಟ್ಟು ಮೀಸಲಾತಿಯ ಪ್ರಮಾಣ ಶೇ 50ರಷ್ಟನ್ನು ಮೀರುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸುಗ್ರೀವಾಜ್ಞೆಯ ವ್ಯಾಪ್ತಿಯಲ್ಲೇ ವಾರ್ಡ್‌ಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.