ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ತ್ಯಾಜ್ಯ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಅಧ್ಯಕ್ಷ ತುಷಾರ್ ಗಿರಿನಾಥ್ ಸೂಚಿಸಿದರು.
ಬಿಬಿಎಂಪಿ, ಬಿಎಸ್‌ಡಬ್ಲ್ಯುಎಂಎಲ್, ಸಿ40 ನಗರಗಳ ಸಹಯೋಗ, ಸೆನ್ಸಿಂಗ್ ಲೋಕಲ್ ಹಾಗೂ ಸಾಹಸ್ ಸಂಸ್ಥೆಯ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ, ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ, ತುರ್ತು ವೈದ್ಯಕೀಯ ಸಹಾಯ ಮಾಡಬೇಕು. ತ್ಯಾಜ್ಯ ಕಾರ್ಮಿಕರು ಹಾಗೂ ಮೇಲ್ವಿಚಾರಣೆ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ಸಭೆ ನಡೆಸಬೇಕು. ಸಮಸ್ಯೆಗಳನ್ನು ಪತ್ತೆಹಚ್ಚಿ, ಸಂವಹನಕ್ಕೆ ವೇದಿಕೆ ಒದಗಿಸಿ ಒಟ್ಟಿಗೆ ಸಮಸ್ಯೆ ಪರಿಹಾರ ತಂತ್ರ ರೂಪಿಸಲು ಸೂಚಿಸಿದರು.
ಪೂರ್ವ, ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯಗಳಲ್ಲಿ 600ಕ್ಕೂ ಹೆಚ್ಚು ತ್ಯಾಜ್ಯ ಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ಮೂರು ಹಂತದ ತರಬೇತಿಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.