ADVERTISEMENT

ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಿಸಿ: ಹೈಕೋರ್ಟ್‌ಗೆ ಮನವಿ

ಬಿಬಿಎಂಪಿಯ ಅಸಾಮರ್ಥ್ಯ ಪ್ರಶ್ನಿಸಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 20:02 IST
Last Updated 14 ಅಕ್ಟೋಬರ್ 2019, 20:02 IST
Bruhat Bengaluru Mahanagara Palike (BBMP) office building, NR Square in Bengaluru. Photo by S K Dineshpvec13mar17bbmp 2
Bruhat Bengaluru Mahanagara Palike (BBMP) office building, NR Square in Bengaluru. Photo by S K Dineshpvec13mar17bbmp 2   

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾಯಿತ ಸದಸ್ಯರನ್ನು ವಜಾಗೊಳಿಸಿ ಆಡಳಿತಾಧಿಕಾರಿ ನೇಮಿಸಬೇಕು’ ಎಂದು ಹೈಕೋರ್ಟ್‌ಗೆ ಮೌಖಿಕ ಮನವಿ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ನಿರ್ವಹಣೆಯಲ್ಲಿ ಬಿಬಿಎಂಪಿಯಅಸಾಮರ್ಥ್ಯ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಎಸ್‌.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಜೇಶ್‌ ಕುಮಾರ್ ಮತ್ತು ಜಿ.ಆರ್.ಮೋಹನ್, ‘ಘನತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಬಜೆಟ್‌ನಲ್ಲಿ ಸಾವಿರ ಕೋಟಿಗೂ ಹೆಚ್ಚು ಹಣ ಮೀಸಲಿರಿಸಲಾಗಿದೆ. ಆದರೆ, ಪಾಲಿಕೆ ಸದಸ್ಯರು ಮತ್ತು ಗುತ್ತಿಗೆದಾರರು ಶಾಮೀಲಾಗಿ ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆಪಾದಿಸಿದರು.

ADVERTISEMENT

‘ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೋರ್ಟ್‌ಗೆ ಕಾಲಕಾಲಕ್ಕೆ ಸುಳ್ಳು ಪ್ರಮಾಣ ಪತ್ರಗಳನ್ನು ಸಲ್ಲಿಸುತ್ತಾ ಬಂದಿದೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಚನಾತ್ಮಕ ಹೆಜ್ಜೆ ಇರಿಸಿಲ್ಲ. ಆದ್ದರಿಂದ ಕರ್ನಾಟಕ ಪೌರಾಡಳಿತ ಕಾಯ್ದೆ–1976 ಕಲಂ 99ರ ಅನುಸಾರ ಚುನಾಯಿತ ಸದಸ್ಯರನ್ನು ವಜಾಗೊಳಿಸಿ ಆಡಳಿತಾಧಿಕಾರಿ ನೇಮಿಸಬೇಕು. ಇಲ್ಲಿ ನಡೆಯುತ್ತಿರುವ ಅಂದಾದುಂದಿ ಚಟುವಟಿಕೆ ನಿಲ್ಲಿಸಬೇಕು’ ಎಂದು ಮನವಿ ಮಾಡಿದರು.

ಆದರೆ, ಪುಟ್ಟೇಗೌಡರ ಸಮರ್ಥನೆಯನ್ನು ಒಪ್ಪದ ನ್ಯಾಯಪೀಠ, ‘ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ನೀಡಿರುವ ವರದಿಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ನಿಮ್ಮ ಬಿಬಿಎಂಪಿ ಕಾನೂನು ಬಾಹಿರ ಚಟುವಟಿಕೆಗಳನ್ನು ಎಷ್ಟೊಂದು ಸೊಗಸಾಗಿ ನಿರ್ವಹಿಸುತ್ತಿದೆಯಲ್ಲಾ’ ಎಂದು ಕುಟುಕಿತು.

‘ಹೊಸ ಕಟ್ಟಡ ಕಾಮಗಾರಿಗಳಿಂದ ಘನತ್ಯಾಜ್ಯ ವಿಲೇವಾರಿ ಬೃಹತ್‌ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಒಂದು ಹಂತದಲ್ಲಿ, ‘ಹೊಸ ಕಟ್ಟಡ ನಿರ್ಮಾಣದ ಪರವಾನಗಿಯನ್ನು ನಿರ್ಬಂಧಿಸಬೇಕಾದೀತು’ ಎಂದು ಎಚ್ಚರಿಸಿತು. ಮಂಗಳವಾರ (ಅ.15) ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಆದೇಶ ಪ್ರಕಟಿಸುವುದಾಗಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.