ADVERTISEMENT

ಬಿಬಿಎಂಪಿಗೆ ಷೋಕಾಸ್ ನೋಟಿಸ್

ಅಕ್ರಮ ಕಟ್ಟಡಗಳ ಸಮೀಕ್ಷೆ ನಡೆಸಲು ನೀಡಿದ್ದ ಆದೇಶ ಪಾಲಿಸದ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 23:16 IST
Last Updated 9 ಮಾರ್ಚ್ 2020, 23:16 IST
   

ಬೆಂಗಳೂರು:‌ ನಗರದಲ್ಲಿನ ಅನಧಿಕೃತ ಕಟ್ಟಡಗಳ ಸಮೀಕ್ಷೆ ನಡೆಸಲು ನೀಡಿದ ಆದೇಶ ಪಾಲಿಸದ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ಸಿವಿಲ್ ನ್ಯಾಯಾಂಗ ನಿಂದನೆ ಷೋಕಾಸ್ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಈ ಸಂದರ್ಭದಲ್ಲಿ ‘ಏಪ್ರಿಲ್ 1ರ ನಂತರ ಸರ್ವೆ ಆರಂಭಿಸಲಾಗುವುದು’ ಎಂದು ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದರು. ಇದನ್ನು ತಳ್ಳಿ ಹಾಕಿದ ನ್ಯಾಯಪೀಠ, ‘ಕಾರಣ ನೀಡದೆ ವಿಳಂಬ ಮಾಡಲಾಗುತ್ತಿರುವುದನ್ನು ಸಹಿಸುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿತು.

ADVERTISEMENT

‘ಹಂತ–ಹಂತವಾಗಿ ಸರ್ವೆ ನಡೆಸಬೇಕೆಂದು 2019ರ ನ.25ರಂದೇ ಆದೇಶ ನೀಡಲಾಗಿದೆ. ಅದನ್ನು ಪಾಲಿಸದೆ ಪ್ರತಿ ಬಾರಿ ವಿಚಾರಣೆ ವೇಳೆಯೂ ಒಂದಿಲ್ಲೊಂದು ನೆಪವನ್ನು ಬಿಬಿಎಂಪಿ ಹೇಳುತ್ತಿದೆ. ಕೋರ್ಟ್ ಆದೇಶ ಪಾಲಿಸದ ಆಯುಕ್ತರ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬೇರೆ ಪ್ರಕರಣದಲ್ಲೂ ಕೋರ್ಟ್‌ ಆದೇಶವನ್ನು ಆಯುಕ್ತರು ಪಾಲಿಸದೆ ಇರುವುದು ಕಂಡು ಬಂದಿದೆ. ಈ ಹಿಂದೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜರುಗಿಸುವುದರಿಂದ ಕೋರ್ಟ್‌ ಹಿಂದೆ ಸರಿದಿತ್ತು. ಕಠಿಣ ಕ್ರಮ ಜರುಗಿಸದ ಹೊರತು ಆದೇಶಗಳು ಪಾಲನೆಯಾಗುವುದಿಲ್ಲ. ಹೀಗಾಗಿ, ನ್ಯಾಯಾಂಗ ನಿಂದನೆ ಪ್ರಕರಣದ ಅಡಿ ಕ್ರಮ ಜರುಗಿಸಬಾರದೇಕೆ ಎಂಬುದರ ಬಗ್ಗೆ ವಿವರಣೆ ನೀಡಿ’ ಎಂದು ಸೂಚಿಸಿ ಷೋಕಾಸ್ ನೋಟಿಸ್ ಜಾರಿ ಮಾಡಿತು.

‘ಅಗತ್ಯ ಸಿಬ್ಬಂದಿ ಒದಗಿಸಬೇಕು ಎಂಬ ಬಿಬಿಎಂಪಿ ಮನವಿಯನ್ನು ಸರ್ಕಾರ ಪರಿಗಣಿಸಬೇಕು’ ಎಂದು ಸರ್ಕಾರಕ್ಕೂ ಪೀಠ ನಿರ್ದೇಶನ
ನೀಡಿತು.

ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಗುರುತಿಸಲು ಹಂತ ಹಂತವಾಗಿ ಸಮೀಕ್ಷೆ ನಡೆಸಿ, ಅವುಗಳನ್ನು ತೆರವುಗೊಳಿಸಬೇಕು. ಅದಕ್ಕೂ ಮುನ್ನ ಸಮೀಕ್ಷೆ ಹೇಗೆ ನಡೆಯಲಿದೆ ಎಂಬ ಬಗ್ಗೆ ಪಾಲಿಕೆಯು ಡಿ.18ರೊಳಗೆ ಕಾಲಮಿತಿ ಒಳಗೊಂಡ ವೇಳಾಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು 2019ರ ನ.25ರಂದು ಹೈಕೋರ್ಟ್‌ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.