ADVERTISEMENT

ಬಿಬಿಎಂಪಿಗೆ ಹೈಕೋರ್ಟ್‌ ತರಾಟೆ

ಆದೇಶ ಪಾಲಿಸದ ಬೆಂಗಳೂರು ಮಹಾನಗರ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 22:32 IST
Last Updated 20 ಜನವರಿ 2020, 22:32 IST
   

ಬೆಂಗಳೂರು: ‘ಹೈಕೋರ್ಟ್ ಆದೇಶ ಪಾಲಿಸಬೇಕೊ ಬೇಡವೊ ಎಂದು ಸಭೆ ಸೇರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಮತ್ತು ಜನಪ್ರತಿನಿಧಿಗಳು ಯಾವತ್ತಾದರೂ ವಾರ್ಡ್‌ ಸಮಿತಿಗಳ ಪ್ರಗತಿ ಪರಿಶೀಲನೆಗೆ ಪಟ್ಟಾಗಿ ಕೂತು ಚರ್ಚೆ ಮಾಡಿದ್ದಾರಾ’ ಎಂದು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿದೆ.

‘ನಗರದಲ್ಲಿನ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಸಾವು–ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

‘ರಸ್ತೆ ಗುಂಡಿಗಳಿಂದಾಗುವ ಅಪಘಾತಗಳಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಹೈಕೋರ್ಟ್, 2019ರ ಸೆಪ್ಟೆಂಬರ್‌ನಲ್ಲಿ ನೀಡಿದ್ದ ಆದೇಶವನ್ನು ಪಾಲಿಸದೆ ಉದ್ಧಟತನ ಮೆರೆದಿದೆ’ ಎಂದ ನ್ಯಾಯಪೀಠ ಬಿಬಿ ಎಂಪಿ ಆಯುಕ್ತರು, ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ನಡೆಗೆ ಕಡುಕೋಪ ವ್ಯಕ್ತಪಡಿಸಿತು.

ADVERTISEMENT

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರ ಸಮಜಾಯಿಷಿಗೆ ಬೇಸರ ಹೊರ ಹಾಕಿದ ನ್ಯಾಯಪೀಠ, ‘ಹೈಕೋರ್ಟ್‌ ಆದೇಶ ಪ್ರಶ್ನಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಆದರೆ, ವಜಾಗೊಂಡ ಆದೇಶ ಹೊರಬಿದ್ದ ನಂತರವೂ ಹೈಕೋರ್ಟ್ ಆದೇಶ ಜಾರಿ ಮಾಡುವ ಸಂಬಂಧ ಬಿಬಿಎಂಪಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕನಿಷ್ಠ ಪಕ್ಷ ನ್ಯಾಯಾಲಯದ ಕ್ಷಮೆ ಕೋರುವ ಸೌಜನ್ಯವೂ ಈ ಅಧಿಕಾರಿಗಳಿಗಿಲ್ಲ’ ಎಂದು ಕಿಡಿಕಾರಿತು.

ಪಾಲಿಕೆ ಪರ ವಕೀಲ ಕೆ.ಎನ್. ಪುಟ್ಟೇಗೌಡ, ‘ಕೋರ್ಟ್‌ ಮತ್ತು ಅದರ ಆದೇಶಗಳ ಬಗ್ಗೆ ಬಿಬಿಎಂಪಿಗೆ ಅಪಾರ ಗೌರವವಿದೆ. ಕೋರ್ಟ್‌ ಆದೇಶವನ್ನು ಪಾಲನೆ ಮಾಡದಿರಲು ಅಧಿಕಾರಿಗಳು ಸಭೆ ನಡೆಸಿಲ್ಲ. ಬದಲಾಗಿ ಚುನಾಯಿತ ಸದಸ್ಯರ ಗಮನಕ್ಕೆ ತರಲು ಮತ್ತು ಆದೇಶ ಜಾರಿಗೆ ಮಾರ್ಗಸೂಚಿ ರಚಿಸಲು ಆಯುಕ್ತರು ಸಭೆ ನಡೆಸಿದ್ದರು’ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ತೃಪ್ತವಾಗದ ನ್ಯಾಯಪೀಠ, ‘ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲು ಪಾಲಿಕೆ ಆಯುಕ್ತರು ನಡೆಸಿದ ಸಭೆಯಲ್ಲಿ ಭಾಗವಹಿಸಿದ ಎಲ್ಲ ಜನಪ್ರತಿನಿಧಿಗಳ ಹೆಸರು ಮತ್ತು ವಿಳಾಸದ ವಿವರಗಳನ್ನು ಇದೇ 30ರೊಳಗೆ ನೀಡಬೇಕು’ ಎಂದು ಆದೇಶಿಸಿತು.

ಆಕ್ಷೇಪ: ಅರ್ಜಿದಾರರ ಪರ ವಕೀಲೆ ಎಸ್‌.ಆರ್‌.ಅನುರಾಧಾ, ‘ರಸ್ತೆ ಅಭಿವೃದ್ಧಿ ಪಡಿಸಿದ ಗುತ್ತಿಗೆದಾರರೇ ಗುಂಡಿಗಳನ್ನು ಮುಚ್ಚಬೇಕು. ಆದರೆ ಅವರು ಯಾರೂ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಪಾಲಿಕೆ ತನ್ನ ಹಣದಲ್ಲಿಯೇ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಮೂಲಕ ಸಾರ್ವಜನಿಕರ ಹಣ ವ್ಯಯ ಮಾಡುತ್ತಿದೆ’ ಎಂದು ಆಕ್ಷೇಪಿಸಿದರು.

ಇದನ್ನು ಅಲ್ಲಗಳೆದ ಪುಟ್ಟೇಗೌಡ, ‘ನ್ಯಾಯಾಲಯದ ಆದೇಶದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ಬಂದ ದೂರುಗಳನ್ನು ಆಧರಿಸಿ ಗುಂಡಿ ಮುಚ್ಚಲಾಗಿದೆ. ರಸ್ತೆ ಗುಂಡಿಗಳಿಗೆ ಕಾರಣರಾದ ಗುತ್ತಿಗೆದಾರರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಇದಕ್ಕೆ ನ್ಯಾಯಪೀಠ, ‘ಹೈಕೋರ್ಟ್ 2019ರ ಜುಲೈನಲ್ಲಿ ನೀಡಿದ್ದ ಆದೇಶದಂತೆ 108 ರಸ್ತೆಗಳ 401 ಕಿ. ಮೀ ಉದ್ದದಷ್ಟು ರಸ್ತೆಯನ್ನು ಗುಂಡಿ ರಹಿತಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಇದೇ 30ರೊಳಗೆ ವಿವರ ನೀಡಬೇಕು’ ಎಂದು ತಾಕೀತು ಮಾಡಿ, ವಿಚಾರಣೆ ಮುಂದೂಡಿದೆ.

‘ಪಾಠ ಕಲಿಸುವ ಸಮಯ ಬಂದಿದೆ’
‘ಹೈಕೋರ್ಟ್‌ನ ಯಾವ ಆದೇಶಗಳಿಗೂ ಬಿಬಿಎಂಪಿ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ. ಹೈಕೋರ್ಟ್‌ ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಕೂರುವುದಿಲ್ಲ. ಬಿಬಿಎಂಪಿಗೆ ತಕ್ಕ ಪಾಠ ಕಲಿಸುವ ಸಮಯ ಈಗ ಕೂಡಿ ಬಂದಿದೆ’ ಎಂದು ನ್ಯಾಯಪೀಠ ಎಚ್ಚರಿಸಿದೆ.

*
ರಸ್ತೆಗುಂಡಿ ಭರ್ತಿ, ಪರಿಹಾರಕ್ಕೆ ಸಂಬಂ ಧಿಸಿದಂತೆ ಈ ಹಿಂದಿನ ಆದೇಶದಂತೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾ ಗಬೇಕು. ಇಲ್ಲವಾದರೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲಾಗುವುದು.
-ಅಭಯ್‌ ಎಸ್‌.ಓಕಾ, ‌ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.